ರಾಜ್ಯದಲ್ಲಿ ತರಬೇತಿ ಪಡೆದಿದ್ದ ಮಾವೋವಾದಿ ದಂಪತಿ ಬಂಧನ

ತಿರುವಲ್ಲೂರು : ಕರ್ನಾಟಕದಲ್ಲಿ ಶಸ್ತ್ರಾಸ್ತ್ರ ತರಬೇತಿ ಪಡೆದು ಕಳೆದೊಂದು ದಶಕದಿಂದ ತಲೆಮರೆಸಿಕೊಂಡಿದ್ದ ಮಾವೋವಾದಿ ದಂಪತಿ ಡಿ ದಶರಥನ್ ಹಾಗೂ ಆತನ ಪತ್ನಿ ಶೆನಬಗವಳ್ಳಿ ಆಲಿಯಾಸ್ ಕನ್ನಿಮೋಝಿ ಎಂಬವರನ್ನು  ಪೊಲೀಸರು ತಮಿಳುನಾಡಿನಲ್ಲಿ  ಬಂಧಿಸಿದ್ದಾರೆ. ಅವರ ಬಳಿಯಿಂದ ಲ್ಯಾಪ್ಟಾಪ್, ಸ್ಮಾರ್ಟ್ ಫೋನ್ ಹಾಗೂ ಹಲವಾರು ಸರಕಾರಿ ವಿರೋಧಿ ಕರಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅವರಿಬ್ಬರಿಗೆ ಆಶ್ರಯ ನೀಡಿದ್ದ ದಶರಥನ್ ಸಹೋದರ ವೇಟ್ರಿ ವೀರಪಾಂಡ್ಯನ್ ಎಂಬಾತನನ್ನೂ ಬಂಧಿಸಿದ್ದಾರೆ. ಮಾವೋವಾದಿ ಚಳುವಳಿಗೆ ಸದಸ್ಯರನ್ನು ಸೇರಿಸಲು ಆತ ಸಹಕರಿಸುತ್ತಿದ್ದನೆನ್ನಲಾಗಿದೆ.

ತಿರುವಲ್ಲೂರು ಮುಖಾಂತರ ಚೆನ್ನೈಗೆ ಹೊರಟಿದ್ದ ದಂಪತಿಯನ್ನು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಪ್ರಕರಣಗಳನ್ನು ನಿಭಾಯಿಸುವ ಕ್ಯೂ ಪಡೆಯ ಸಿಬ್ಬಂದಿಗಳು  ಆಂಧ್ರ ಗಡಿಯಿಂದ ಸುಮಾರು 20 ಕಿಮೀ ದೂರದಲ್ಲಿರುವ ಪುಲ್ಲರಂಬಕ್ಕಮ್ ಕೂಟ್ ರಸ್ತೆಯಲ್ಲಿ ಬಂಧಿಸಿದರು. ಪೊಲೀಸರು ಬೆಂಬತ್ತಿದ್ದಾರೆ ಎಂದು ತಿಳಿಯುತ್ತಲೇ ಮಾವೋವಾದಿ ದಂಪತಿಗಳು ಆಟೋವೊಂದರಿಂದ ಇಳಿದು ಓಡಲು ಯತ್ನಿಸಿದರೂ ಪೊಲೀಸರು ಅವರನ್ನು ಬಂಧಿಸಿದರು. ಇನ್ನೊಬ್ಬ ಆರೋಪಿಯನ್ನು ಪೂಂಡಿ ಸಮೀಪದ ಆತನ ನಿವಾಸದಿಂದ ಬಂಧಿಸಲಾಯಿತು.

ಬಂಧಿತ ಮಹಿಳೆ ಶೆನಬಗವಳ್ಳಿಯ ತಂದೆ ಬಾಲನ್ ಕೂಡ ಮಾಜಿ ಮಾವೋವಾದಿಯಾಗಿದ್ದು ಆಕೆ ಕೃಷ್ಣಗಿರಿ ಜಿಲ್ಲೆಯ ಉತ್ತಂಗರೈ ಎಂಬಲ್ಲಿಗೆ ಸಮೀಪದ ಸಿಂಗರಪೆಟ್ಟೈ ಗ್ರಾಮದವಳು.  ದಶರಥನ್ ತಿರುವಲ್ಲೂರು ಸಮೀಪದ ಪುಲರಂಬಕ್ಕಂ ಎಂಬಲ್ಲಿನ ಒತ್ತಂಬೈ ಗ್ರಾಮದವನಾಗಿದ್ದಾನೆ.

ಕೊಡೈಕನಾಲ್ ಎಂಬಲ್ಲಿ 2008ರಲ್ಲಿ ಪೊಲೀಸರ ಜತೆ ಎನ್ಕೌಂಟರಿನಲ್ಲಿ ಹತ್ಯೆಗೀಡಾಗಿದ್ದ ಧರ್ಮಪುರಿ ನವೀನ್ ಎಂಬಾತನ ಜತೆಗೇ ಈ ದಂಪತಿ ಸ್ವಯಂಚಾಲಿತ ಶಸ್ತ್ರಾಸ್ತ್ರ ತರಬೇತಿ ಪಡೆದಿದ್ದರು.

LEAVE A REPLY