ನಗರದಲ್ಲಿ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಮಾದಕ ವ್ಯಸನಿಗಳು : ಶ್ರೀಕುಮಾರ್ ಮೆನನ್

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಪಿ ಯು ಕಾಲೇಜು ಮತ್ತು ಹೈಸ್ಕೂಲು ಓದುತ್ತಿರುವ ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗಿದ್ದಾರೆ ಎಂದು ಯೆನೆಪೋಯ ಯುನಿವರ್ಸಿಟಿಯ ಮಾದಕ ವ್ಯಸನ ವಿಷಯದ ತಜ್ಞ ಶ್ರೀಕುಮಾರ್ ಮೆನನ್ ಹೇಳಿದರು.

ಬೋಳಾರದ ಲಿಂಕ್ ಡಿ ಅಡಿಕ್ಷನ್ ಮತ್ತು ಪುನರ್ವಸತಿ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ನಡೆಸಲಾದ ಸಂದರ್ಶನದಲ್ಲಿ ಈ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

“ಸಂದರ್ಶನಕ್ಕೆ ಒಳಪಡಿಸಿದ 2852 ವಿದ್ಯಾರ್ಥಿಗಳ ಪೈಕಿ ಶೇಕಡಾ 6.31 ವಿದ್ಯಾರ್ಥಿಗಳು ಮತ್ತು ಶೇಕಡಾ 1.18 ವಿದ್ಯಾರ್ಥಿನಿಯರು ಮಾದಕ ವ್ಯಸನಿಗಳಾಗಿದ್ದಾರೆ ಎಂದು ತಿಳಿದುಬಂದಿದೆ. 2016ರಲ್ಲಿ ನಡೆಸಲಾದ ಸಂದರ್ಶನದಲ್ಲಿ ಕಂಡುಬಂದ ಸಂಖ್ಯೆಗಿಂತ ಈ ಬಾರಿಯ ಸಂಖ್ಯೆ ಆಘಾತಕಾರಿಯಾಗಿದೆ. ಕಾಲೇಜು ಮತ್ತು ಶಾಲಾ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯ ಮದ್ಯವ್ಯಸನಿಗಳ ಗುಂಪನ್ನೇ ರಚಿಸಿಕೊಂಡಿದ್ದಾರೆ. ಹಾಗಾಗಿ ಮಂಗಳೂರು ಮತ್ತು ಮಣಿಪಾಲದಂತಹ ಶೈಕ್ಷಣಿಕ ನಗರಗಳಲ್ಲಿ ಶಿಕ್ಷಣ ಕೇಂದ್ರಗಳ ಗಮನ ಕೇಂದ್ರೀಕರಿಸಲು ಇದೊಂದು ಎಚ್ಚರಿಕೆಯ ಕರೆ” ಎಂದು ಶ್ರೀಕುಮಾರ್ ಮೆನನ್ ಹೇಳಿದರು.

ಮಾದಕವಸ್ತು ವ್ಯವಹಾರ ನಿಗ್ರಹಕ್ಕೆ ಕಂದಾಯ, ಕೇಂದ್ರ ಅಬಕಾರಿ, ರಾಜ್ಯ ಪೊಲೀಸ್, ಗಡಿ ಭದ್ರತಾ ಪಡೆ, ಎಸ್ ಎಸ್ ಬಿ, ಅಸ್ಸಾಮಿಸ್ ರೈಫಲ್ಸ್, ಕೋಸ್ಟ್ ಗಾರ್ಡ್, ಅರಣ್ಯ ಇಲಾಖೆ, ಗುಪ್ತಚರ ಇಲಾಖೆ, ಕರಾವಳಿ ಪೊಲೀಸ್ ಪಡೆ, ರೈಲ್ವೇ ಹಾಗೂ ಇನ್ನಿತರ ಹಲವು ಏಜೆನ್ಸಿಗಳು ಭಾಗಿಗಳಾಗಿವೆ. “ವಿವಿಧ ಏಜೆನ್ಸಿಗಳ ಸಂಯೋಜಿತ ಪ್ರಯತ್ನಗಳು ಅನಿಯಮಿತ. ಇದೇ ವೇಳೆ ಭಾರತಕ್ಕೆ ಇದೀಗ ಅಮೆರಿಕ ದೇಶದಲ್ಲಿರುವಂತೆ ಡ್ರಗ್ ಎನ್ಫೋರ್ಸ್ಮೆಂಟ್ ಅಡ್ಮಿನಿಸ್ಟ್ರೇಷನ್ ಅವಶ್ಯಕತೆ ಹೆಚ್ಚಾಗಿ ಕಂಡು ಬರುತ್ತಿದೆ ಎಂದು ಶ್ರೀಕುಮಾರ್ ಮೆನನ್ ಹೇಳಿದರು.