ಕೊನೆಗೂ ಮಂಜೇಶ್ವರ ಸಬ್ ರಿಜಿಸ್ಟ್ರಾರ್ ಕಚೇರಿಗೆ ಮುಕ್ತಿ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಸುಮಾರು 142 ವರ್ಷ ಪುರಾತನವಾಗಿರುವ ಬ್ರಿಟಿಷರ ಕಾಲದಲ್ಲಿ ಕಟ್ಟಿದ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಮಂಜೇಶ್ವರ ಸಬ್ ರಿಜಿಸ್ಟ್ರಾರ್ ಕಚೇರಿ ಕೊನೆಗೂ ಮುಕ್ತಿ ಹೊಂದುವ ನಿರೀಕ್ಷೆಯಲ್ಲಿದ್ದು, ಕಾಸರಗೋಡು ಅಭಿವೃದ್ಧಿ ಯೋಜನೆಯ ಭಾಗವಾಗಿ ಈಗ ಇರುವ ಹಳೆಯದಾದ ಕಟ್ಟಡವನ್ನು ಕೆಡವಿ ನೂತನ ಕಟ್ಟಡ ನಿರ್ಮಾಣಕ್ಕಾಗಿ 2016-17ರ ಆರ್ಥಿಕ ವರ್ಷದ ಯೋಜನೆಯಡಿಯಲ್ಲಿ ಪೂರ್ತೀಕರಿಸುವಂತೆ 78.44 ಲಕ್ಷ ರೂ ಸರಕಾರ ಅನುಮತಿಸಿದೆ. ಮಳೆಗಾಲದ ಸಮಯದಲ್ಲಿ ಹೆಂಚುಗಳು ಹಾರಿಹೋದ ಈ ಕಟ್ಟಡದಲ್ಲಿ ಮಳೆ ನೀರು ಕಚೇರಿಯೊಳಗೆ ಬೀಳುತ್ತಿದ್ದು, ಕಡತಗಳು ನೀರು ಪಾಲಾಗುತ್ತಿರುವುದು ಸಂದರ್ಶಕರಿಗೆ ನಿತ್ಯ ದರ್ಶನವಾಗಿತ್ತು.

ರಾಜ್ಯ ಸರಕಾರಕ್ಕೆ ವರ್ಷಂಪ್ರತಿ 6 ಕೋಟಿಗೂ ಮಿಕ್ಕಿ ಆದಾಯ ತರುವ ಈ ಕಚೇರಿಯ ದುರಾವಸ್ಥೆಯನ್ನು ಯಾರೂ ಕೇಳೋರಿಲ್ಲದಂತಾಗಿತ್ತು. ಮಂಜೇಶ್ವರ, ವರ್ಕಾಡಿ, ಮೀಂಜ, ಮಂಗಲ್ಪಾಡಿ, ಪೈವಳಿಕೆ ಸೇರಿದಂತೆ ವಿವಿಧ ಪಂಚಾಯತಿಗೊಳಪಟ್ಟ 31 ಗ್ರಾಮಗಳು ಈ ಸಬ್ ರಿಜಿಸ್ಟ್ರಾರ್ ಕಚೇರಿ ವ್ಯಾಪ್ತಿಗೊಳಪಟ್ಟಿದೆ.

1884ರಿಂದೀಚಿಗಿನ ದಾಖಲೆಗಳು ಈ ಕಚೇರಿಯಲ್ಲಿದ್ದು, ಕಡತಗಳು ನಾಶವಾಗುವ ಹಂತಕ್ಕೆ ತಲುಪಿತ್ತು. ಮಳೆ ನೀರು ಸುರಿಯುತ್ತಿದ್ದುದನ್ನುತಡೆಯಲು ಕಚೇರಿ ನೌಕರರು 3000 ರೂ ಖರ್ಚು ಮಾಡಿ ಕಚೇರಿಯ ಹಂಚಿನ ಮೇಲ್ಬದಿಗೆ ಟರ್ಪಾಲು ಹಾಕಿಸಿದ್ದರು.

92 ಸೆಂಟ್ಸ್ ವ್ಯಾಪ್ತಿಯಲ್ಲಿ ಕಚೇರಿ ಕಟ್ಟಡವಿದ್ದು, ಗೋಡೆ ಸಮರ್ಪಕವಾಗಿದ್ದರೂ ಮೇಲಿನ ಹಂಚು ಹಾಗೂ ಪಕ್ಕಾಸು ಶಿಥಿಲಾವಸ್ಥೆಯಲ್ಲಿರುವುದರಿಂದ ಸಿಬ್ಬಂದಿ ಏನು ಮಾಡಬೇಕೆಂದು ತಿಳಿಯದೆ ಪರದಾಡುತ್ತಿದ್ದರು. ವರ್ಷಗಳ ಹಿಂದೆ ನೂತನ ಕಟ್ಟಡಕ್ಕೆ ಹಿಂದಿನ ಯುಡಿಎಫ್ ರಾಜ್ಯ ಸರಕಾರ 17 ಲಕ್ಷ ರೂ ಮಂಜೂರು ಮಾಡಿದ್ದರೂ, ಸರಕಾರ ಔದ್ಯೋಗಿಕ ಅನುಮತಿ ನೀಡದೇ ಇರುವುದರಿಂದ ನೂತನ ಕಟ್ಟಡ ಎಂಬುದು ಕಡತದಲ್ಲೇ ಉಳಿಯುವಂತಾಗಿತ್ತು. ಸರಕಾರಕ್ಕೆ ಕೋಟ್ಯಂತರ ರೂ ಆದಾಯ ತರುವ ಈ ಕಚೇರಿಯ ದುರವಸ್ಥೆಗೆ ಶಾಶ್ವತ ಪರಿಹಾರ ಕಾಣಬೇಕೆಂದು ಇಲ್ಲಿನ ನಾಗರಿಕರ ನಿರಂತರ ಒತ್ತಾಯವಾಗಿತ್ತು.

ನೂರಾರು ವರ್ಷಗಳ ಹಿಂದೆ ಕಟ್ಟಿದ ಈ ಕಚೇರಿಯ ಶಿಥಿಲಾವಸ್ಥೆಯನ್ನು ಪರಿಹರಿಸುವಂತೆ ಇಲ್ಲಿನ ಗ್ರಾಹಕರ ವೇದಿಕೆ, ಮಂಜೇಶ್ವರ ಅಭಿವೃದ್ಧಿ ಸಮಿತಿ, ವ್ಯಾಪಾರ ಏಕೋಪನ ಸಮಿತಿ ಸೇರಿದಂತೆ ಹಲವು ಸಂಘಟನೆಗಳು ಸಂಬಂಧಪಟ್ಟ ಸಚಿವರು, ಶಾಸಕರು ಹಾಗೂ ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದರು. ಇದೀಗ ನೂತನ ಸರಕಾರವು ಕಾಸರಗೋಡು ಅಭಿವೃದ್ಧಿ ಯೋಜನೆಯಡಿ ಮಂಜೇಶ್ವರ ಸಬ್ ರಿಜಿಸ್ಟ್ರಾರ್ ನೂತನ ಕಟ್ಟಡಕ್ಕೆ ಸರಕಾರ 78.44 ಲಕ್ಷ ರೂ ಅನುಮತಿಸಿರುವುದನ್ನು ಮಂಜೇಶ್ವರದ ಸಂಘ ಸಂಸ್ಥೆಗಳು ಸ್ವಾಗತಿಸಿವೆ.