ಮಂಜೇಶ್ವರ ವಿಧಾನಸಭಾ ಚುನಾವಣೆಯಲ್ಲಿ ಕಳ್ಳ ಮತ ಪ್ರಕರಣದ ತನಿಖೆ ಜ 22ರಿಂದ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಮಂಜೇಶ್ವರದಲ್ಲಿ ಮುಸ್ಲಿಂ ಲೀಗ್ ಅಭ್ಯರ್ಥಿ ಕಳ್ಳ ಮತ ಚಲಾಯಿಸಿ ಗೆಲುವು ಸಾಧಿಸಿದ್ದಾರೆ ಎಂಬ ಬಿಜೆಪಿ ಅಭ್ಯರ್ಥಿ ಹಾಗೂ ಪಕ್ಷದ ನೇತಾರ ಕೆ ಸುರೇಂದ್ರನ್ ಅವರ ಅರ್ಜಿಯ ತನಿಖೆ ಜನವರಿ 22ರಂದು ಆರಂಭಗೊಳ್ಳಲಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಕೆ ಸುರೇಂದ್ರನ್ ಹೊಸ 26 ಸಾಕ್ಷ್ಯಾಧಾರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಈ ಹಿಂದೆ 259 ಸಾಕ್ಷಿಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ನೀಡಿದ್ದು, ಅದರಲ್ಲಿ 181 ಮಂದಿಯ ವಿಚಾರಣೆ ನಡೆಸಲಾಗಿತ್ತು. ಇವರಲ್ಲಿ ಬಹುತೇಕ ಮಂದಿ ಮತ ಚಲಾಯಿಸದವರು ಎಂದು ತಿಳಿದುಬಂದಿತ್ತು. 22 ಮಂದಿ ವಿದೇಶದಲ್ಲಿದ್ದು, ಅವರ ಮತವನ್ನು ಊರಿನಲ್ಲಿದ್ದವರು ಚಲಾಯಿಸಿದ್ದರು.

ಮಂಜೇಶ್ವರ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ಲೀಗ್ ಅಭ್ಯರ್ಥಿ ಅಬ್ದುಲ್ ರಜಾಕ್ ಅವರು 89 ಮತಗಳಿಂದ ವಿಜಯಿಯಾಗಿದ್ದರು. ಇವರು ಕಳ್ಳ ಮತ ಚಲಾಯಿಸಿ ಗೆದ್ದರೆಂದು ಬಿಜೆಪಿ ಅಭ್ಯರ್ಥಿ ಸುರೇಂದ್ರನ್ ಹೈಕೋರ್ಟಿನಲ್ಲಿ ದೂರಿದ್ದರು. ಸುಮಾರು 200ರಷ್ಟು ಮಂದಿ ವಿದೇಶದಲ್ಲಿರುವ ಹಾಗೂ ವಿಳಾಸವಿಲ್ಲದ ಮಂದಿ ಮತ ಚಲಾಯಿಸಿದ್ದು, ಈ ಬಗ್ಗೆ ತನಿಖೆ ನಡೆಸಬೇಕೆಂದು ಕೋರಲಾಗಿತ್ತು.

ಕೆ ಸುರೇಂದ್ರನ್ ಅವರ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯವು ಸಾಕ್ಷಿಗಳ ವಿಚಾರಣೆ ನಡೆಸಲು ಆರಂಭಿಸಿದ್ದು ಈಗಾಗಲೇ 181 ಮಂದಿಯ ವಿಚಾರಣೆ ಪೂರ್ಣಗೊಂಡಿದೆ.

LEAVE A REPLY