ಕತಾರಲ್ಲಿ ಕೆಲಸ ಕೊಡಿಸುವ ವಂಚನೆ ; ದಿಗ್ಬಂಧನದಲ್ಲಿ ಮಂಗಳೂರಿನ ಯುವತಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ವಿದೇಶದಲ್ಲಿ ಕೈತುಂಬಾ ಸಂಬಳ ಬರುವ ಕೆಲಸ ಕೊಡಿಸುವುದಾಗಿ ಹೇಳಿ ವಂಚನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಲಶೇಖರ ನಿವಾಸಿ ಜೇಮ್ಸ್ ಡಿಮೆಲ್ಲೋ(35)ನನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಜೇಮ್ಸ್ ಡಿ ಸೋಜಾ ಏಜೆಂಟನಾಗಿ ಕೆಲಸ ಮಾಡಿಕೊಂಡಿದ್ದಾತ. ಕಾರ್ಕಳದ ಮುದರಂಗಡಿ ನಿವಾಸಿ ಜೆಸಿಂತಾರಿಗೆ ಕತಾರಿನಲ್ಲಿ ಹೋಂ ನರ್ಸಿಂಗ್ ಉದ್ಯೋಗ ಕೊಡಿಸುವುದಾಗಿ ವಂಚನೆ ಮಾಡಿದ್ದಾನೆ. ಮುಂಬಯಿ ಏಜೆಂಟ್ ಶಾಬಾಖಾನನನ್ನು ಸಂಪರ್ಕಿಸಿದ್ದ ಜೇಮ್ಸ್, ಜೆಸಿಂತಾರನ್ನು ಆತನಿಗೆ ಪರಿಚಯಿಸಿ ಕತಾರಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಿದ್ದ. ಆದರೆ ಶಾಬಾಖಾನ್ ಜೆಸಿಂತಾರನ್ನು ಕತಾರಿಗೆ ಕಳುಹಿಸಲೇ ಇಲ್ಲ. ಸೌದಿ ಅರೇಬಿಯಾದ ವ್ಯಕ್ತಿಯೊಬ್ಬನಿಂದ ಹಣ ಪಡೆದು ಒಂದು ವರ್ಷದ ಹಿಂದೆ ಅಲ್ಲಿಗೆ ಕಳುಹಿಸಿಕೊಟ್ಟಿದ್ದಾನೆ. ಇದರಿಂದ ಜೆಸಿಂತ ಸೌದಿಯಲ್ಲಿ ದಿಗ್ಬಂಧನದಲ್ಲಿದ್ದು, ಭಾರತಕ್ಕೆ ಮರಳಲಾಗದೇ ಮಾನಸಿಕ ಹಿಂಸೆ ಅನುಭವಿಸುತ್ತಿದ್ದರು.

ಕೊನೆಗೆ ಈ ವಿಚಾರ ಮನೆ ಮಂದಿಗೆ ತಿಳಿದಿದ್ದು, ಅವರು ಮರಳಿ ತಾಯ್ನಾಡಿಗೆ ಈಕೆಯನ್ನು ಕರೆಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಮುಂಬೈನಲ್ಲಿರುವ ಶಾಬಾಖಾನ್ ಸೌದಿ ವ್ಯಕ್ತಿಯಿಂದ 5 ಲಕ್ಷ ರೂ ಹಣ ಪಡೆದುಕೊಂಡಿದ್ದು, ಅದರಲ್ಲಿ 25,000 ರೂ ಜೇಮ್ಸಗೆ ಕೊಟ್ಟಿದ್ದಾನೆ. ಇದೀಗ ಆರೋಪಿ ಜೇಮ್ಸನನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬಯಿ ಏಜೆಂಟ್ ಶಾಬಾಖಾನ್ ಬಂಧನಕ್ಕೆ ಬಲೆ ಬೀಸಿದ್ದಾರೆ.