18 ತಿಂಗಳಲ್ಲಿ ಮಂಗಳೂರು ತಾ ಪಂ ಹೊಸ ಕಟ್ಟಡ ಸಿದ್ಧ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮಂಗಳೂರು ತಾಲೂಕು ಪಂಚಾಯತ ಶೀಘ್ರದಲ್ಲೇ ಹೊಸ ಕಟ್ಟಡವನ್ನು ಹೊಂದಲಿದೆ. ಸುಮಾರು 2,628 ಚದರ ಮೀಟರ್ ವಿಸ್ತಾರದಲ್ಲಿ ಹೊಸ ಕಟ್ಟಡ ಅಸ್ತಿತ್ವಗೊಳ್ಳಲಿದೆ.

ಸುಮಾರು ಅಂದಾಜು 3.5 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕಟ್ಟಡದ ಕಾಮಗಾರಿ ಕೆಲಸವು ಮೇ 21ರಿಂದ ಆರಂಭವಾಗಲಿದೆ. 18 ತಿಂಗಳೊಳಗೆ ಕಟ್ಟಡ ಎದ್ದು ನಿಲ್ಲಲಿದೆ.

“ಪ್ರಸಕ್ತ ಇರುವ 60 ವರ್ಷಗಳ ಹಳೆಯ ಕಟ್ಟಡವನ್ನು ನೆಲಸಮಗೊಳಿಸಿದ ಬಳಿಕ ಹೊಸ ಕಟ್ಟಡ ನಿರ್ಮಾಣವಾಗಲಿದೆ, ಸರ್ಕಾರ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿನಲ್ಲಿ ಹೊಸ ತಾ ಪಂ ಕಟ್ಟಡಕ್ಕಾಗಿ ಮನವಿ ಮಾಡಿದ್ದೆವು. ಹಾಗಾಗಿ ಸರ್ಕಾರ ಹೊಸ ಕಟ್ಟಡಕ್ಕಾಗಿ ಪ್ರಸ್ತಾವಿಸಿದ್ದ 3.50 ಕೋಟಿ ರೂ ಮೊತ್ತವನ್ನು ಬಿಡುಗಡೆ ಮಾಡಿದೆ. ಕಟ್ಟಡವು ಒಂದು ನೆಲಮಾಳಿಗೆ, ನೆಲಮಹಡಿ, 567 ಚದರ ಮೀಟರ್ ವಿಸ್ತಾರದ 2 ಹೆಚ್ಚುವರಿ ಮಾಳಿಗೆ ಹೊಂದಿರುತ್ತದೆ” ಎಂದು ಮಂಗಳೂರು ತಾ ಪಂ ಅಧ್ಯಕ್ಷ ಮಹಮ್ಮದ್ ಮೋನು ಹೇಳಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್ ಕೆ ಪಾಟೀಲ್ ಮೇ 21ರಂದು ಕಟ್ಟಡಕ್ಕೆ ಅಡಿಪಾಯ ಹಾಕಲಿದ್ದಾರೆ.