ಮಂಗಳೂರಿನಲ್ಲಿಯೂ ರಂಗಾಯಣ ಬೇಕು

ಕರಾವಳಿ ಕರ್ನಾಟಕದ ರಂಗಭೂಮಿ ಮತ್ತು ಸಾಂಸ್ಕøತಿಕ ವಲಯವು ಇನ್ನಷ್ಟು ಸಮೃದ್ಧ ಹಾಗೂ ಪ್ರಭಾವಿಯಾಗಲು, ಇಲ್ಲಿನ ಸಂಸ್ಕøತಿ, ಕಲೆ, ಮತ್ತು ಭಾಷೆಗಳ ಸೊಗಡು ರಾಜ್ಯದ ಬೇರೆ ಬೇರೆ ಕಡೆಗೆ ಪರಿಣಾಮಕಾರಿಯಾಗಿ ಪಸರಿಸಲು ಮೈಸೂರಿನ ರಂಗಾಯಣದ ಮಾದರಿಯಲ್ಲಿ ಮಂಗಳೂರಿನಲ್ಲಿ ರಂಗಾಯಣದ ಕೇಂದ್ರ ಸ್ಥಾಪನೆಯಾಗಬೇಕು. ಇದು ಈ ಭಾಗದ ಜನತೆಯ ಬಹುಕಾಲದ ಬೇಡಿಕೆಯಾಗಿದೆ. ಈ ಬಾರಿಯ ಬಜೆಟ್‍ನಲ್ಲಿ ಮಂಗಳೂರಿನಲ್ಲಿ ರಂಗಾಯಣ ಕೇಂದ್ರದ ಸ್ಥಾಪನೆಯನ್ನು ಘೋಷಿಸಬೇಕು.
ರಾಜ್ಯದ ಮುಖ್ಯಮಂತ್ರಿಗಳನ್ನು ಇತ್ತೀಚೆಗೆ ಅವರ `ಕೃಷ್ಣ’ ನಿವಾಸ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಅರ್ಪಿಸಿ ರಂಗಾಯಣದ ಸ್ಥಾಪನೆಗೆ ಒತ್ತಾಯಿಸಿದ್ದೇನೆ.
ಈ ಭಾಗದ ಸಂಸ್ಕøತಿಯು ವೈವಿಧ್ಯಮಯವಾಗಿದೆ. ಇಲ್ಲಿಯ ಧಾರ್ಮಿಕ ಸಮನ್ವಯ, ಐಕ್ಯ, ಪರಸ್ಪರ ನಂಬಿಕೆ, ಸೌಹಾರ್ಧತೆಗೆ ಇತಿಹಾಸವಿದೆ. ಆದರೆ ಈಗ ಇಲ್ಲಿ ಸಾಂಸ್ಕøತಿಕ ಪ್ರಕ್ಷುಬ್ದತೆ ಹಾಗೂ ಸಾಮಾಜಿಕ ಅಭದ್ರತೆಯ ವಾತಾವರಣವಿದೆ. ಈ ಪರಿಪೇಕ್ಷದ ಹಿನ್ನಲೆಯಲ್ಲಿ ರಂಗಾಯಣದ ಸ್ಥಾಪನೆಯು ಅತೀ ಮುಖ್ಯವಾಗಿದೆ.
ಇಲ್ಲಿಯ ಮೌಖಿಕ ಪರಂಪರೆಯ ಜನಪದ ಸಾಹಿತ್ಯ ಶಿಥಿಲಗೊಳ್ಳುತ್ತಿದೆ. ಮೂಲ ದ್ರಾವಿಡ ಸಂಸ್ಕøತಿಗೆ ಸೇರಿದ ಇಲ್ಲಿಯ ಕೊರಗ, ಪರವ, ಪಂಬದ, ನಲಿಕೆ, ಮಲೆಕುಡಿಯ ಮುಂತಾದ ಸಮುದಾಯಗಳ ವೈವಿಧ್ಯಮಯ ಆಡುನುಡಿಗಳು, ನುಡಿಕಟ್ಟುಗಳು ಅಪಾರ ಶಬ್ದ ಸಂಪತ್ತು ಎಲ್ಲವು ರಂಗಾಯಣದ ಸ್ಥಾಪನೆಯನ್ನು ಸಾರ್ಥಕಗೊಳಿಸಲಿದೆ. ಪಾಡ್ದನಗಳಿಂದ ಹಿಡಿದು ಯಕ್ಷಗಾನಗಳವರೆಗಿನ ಸಾಂಸ್ಕøತಿಕ ಪ್ರಬೇಧಗಳು ರಂಗಭೂಮಿಯನ್ನು ರೂಪಿಸಲು, ಪರಿವರ್ತಿಸಲು ಶ್ರೀಮಂತಗೊಳಿಸಲು ಬೇಕಾದಷ್ಟು ವಸ್ತು ವಿಷಯಗಳನ್ನು, ಸಾಂಸ್ಕøತಿಕ ಸಾಮಾಗ್ರಿಗಳನ್ನು ನೀಡಲಿವೆ.
ಇದರ ಜತೆಗೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನೆಹರು ಚಿಂತನಾಕೇಂದ್ರದ ಸ್ಥಾಪನೆಗೆ ಸಂಬಂಧಿಸಿ ಬಿಡುಗಡೆಯಾಗಬೇಕಾಗಿರುವ 3 ಕೋಟಿ ರೂಪಾಯಿ ಮೊತ್ತವು ಇನ್ನೂ ಆರ್ಥಿಕ ಇಲಾಖೆಯಲ್ಲಿ ನೆನಗುದಿಗೆ ಬಿದ್ದಿರುವುದನ್ನು ಮುಖ್ಯಮಂತ್ರಿಗಳ ಗಮನ ತಂದು ಈ ಕುರಿತು ಕೂಡಲೇ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದೇನೆ

  • ಪಿ ವಿ ಮೋಹನ್  ಎ ಐ ಸಿ ಸಿ ಸದಸ್ಯ, ಮಂಗಳೂರು