ಕುಡ್ಲಕ್ಕೆ ಈ ವರ್ಷ ರಾಜ್ಯದ 2ನೇ ಸಂಜೆ ಪಾಲಿಟೆಕ್ನಿಕ್

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕರಾವಳಿ ನಗರ ಮಂಗಳೂರು ರಾಜ್ಯದ ಎರಡನೇ ಸರ್ಕಾರಿ ಸಂಜೆ ಪಾಲಿಟೆಕ್ನಿಕ್ ಹೊಂದುವ ಎಲ್ಲಾ ಸಿದ್ಧತೆಗಳನ್ನು ನಡೆಸುತ್ತಿದೆ. ಬೆಂಗಳೂರಿನಲ್ಲಿರುವ ಸಂಜೆ ಪಾಲಿಟೆಕ್ನಿಕ್ ಶ್ರೀ ಜಯಚಾಮರಾಜೇಂದ್ರ ರಾಜ್ಯದ ಮೊದಲನೇ ಸಂಜೆ ಪಾಲಿಟೆಕ್ನಿಕ್.

ಮಂಗಳೂರಿನಲ್ಲಿ ಎರಡನೇ ಸಂಜೆ ಪಾಲಿಟೆಕ್ನಿಕ್ ಸ್ಥಾಪಿಸಲು ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಈಗಾಗಲೇ ಅನುಮತಿ ದೊರೆತಿದ್ದು, 2017-18ನೇ ಶೈಕ್ಷಣಿಕ ವರ್ಷದಿಂದ ಕಾರ್ಯಾರಂಭಿಸಲಿದೆ. ಮೂರು ವರ್ಷದ ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೋಮಾ ಕೋರ್ಸುಗಳನ್ನು ಆರಂಭಿಸಲಿದೆ.

ಸಂಜೆ ಪಾಲಿಟೆಕ್ನಿಕ್ ಅಸ್ಥಿತ್ವವು ದಕ್ಷಿಣ ಕನ್ನಡ ಜಿಲ್ಲೆಯನ್ನು ಶೈಕ್ಷಣಿಕ ಕೇಂದ್ರವಾಗಿ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಲಿದೆ ಮಾತ್ರವಲ್ಲ ಕೆಲಸ ಮಾಡುತ್ತಿರುವವರಿಗೆ ತಮ್ಮ ಔಪಚಾರಿಕ ಶಿಕ್ಷಣವನ್ನು ಪೂರೈಸಲು ಒಂದು ಉತ್ತಮ ಅವಕಾಶ.

ಸಂಜೆ ಪಾಲಿಟೆಕ್ನಿಕ್ ಪ್ರಾರಂಭಿಸಲು ಕಾಲೇಜಿನಲ್ಲಿ ಲ್ಯಾಬೋರೇಟರಿ ಮತ್ತು ಕ್ಲಾಸ್ ರೂಮು ಸೌಲಭ್ಯಗಳನ್ನು ಬಳಸಲಾಗುವುದು, ಕಾಲೇಜಿನಲ್ಲಿ ಸಾಮಾನ್ಯ ತರಗತಿಗಳು ಸಂಜೆ 4.30 ಕ್ಕೆ ಮುಗಿಯುತ್ತದೆ. ಕಾಲೇಜಿನ ಮೂಲಭೂತ ಸೌಲಭ್ಯಗಳನ್ನು  ರಾತ್ರಿ 8.30ರವರೆಗೆ ಬಳಕೆ ಮಾಡಬಹುದು. ಸಂಜೆ ಪಾಲಿಟೆಕ್ನಿಕ್ ಸಾಂಕೇತಿಕವಾಗಿ ಆಗಸ್ಟ್ ಅಥವಾ ಸೆಪ್ಟೆಂಬರಿನಿಂದ ಆರಂಭವಾಗುವ ನಿರೀಕ್ಷೆ ಇದೆ.

ಕರ್ನಾಟಕ ಪಾಲಿಟೆಕ್ನಿಕ್ ಪ್ರಾಂಶುಪಾಲರಾದ ಬಾಬು ದೇವಾಡಿಗರು ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕರಿಂದ ಫೆಬ್ರವರಿ 17 ರಂದು ಸ್ವೀಕರಿಸಿದ ಪತ್ರದಲ್ಲಿ 2017-18 ನೇ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಪ್ರಾರಂಭಿಸಬಹುದು ಎಂಬ ನಿರ್ದೇಶನವಿದೆ ಎಂದು ಹೇಳಿದ್ದಾರೆ.