ಸ್ವೈಪಿಂಗ್ ಮಷಿನ್ನಿಗೆ ನಿಧಾನವಾಗಿ ಒಗ್ಗಿಕೊಳ್ಳುತ್ತಿರುವ ಮಂಗಳೂರಿಗರು

ಮಂಗಳೂರು : ಪ್ರಧಾನಿಯವರು ದೇಶಾದ್ಯಂತ ನ 8ರಂದು 500 ಮತ್ತು 1000 ರೂ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ ಬಳಿಕ ಜನ ಚಿಲ್ಲರೆ ಸಮಸ್ಯೆಯಿಂದ ಕಂಗೆಟ್ಟಿದ್ದರು. ಎಲ್ಲಿ ನೋಡಿದರೂ ಚಿಲ್ಲರೆಯದ್ದೇ ಮಾತು. ಈ ನಡುವೆ ಪ್ರಧಾನಿ ತಾನು ನಗದುರಹಿತ ವ್ಯವಹಾರಕ್ಕೆ ಒತ್ತು ನೀಡುತ್ತಿದ್ದೇನೆ, ಎಲ್ಲರೂ ನಗದುರಹಿತ ಸೇವೆಗೆ ಮುಂದಾಗಿ ಎಂದು ಹೇಳುತ್ತಿದ್ದಂತೆ ಜನರಲ್ಲಿ ಇದು ಸಾಧ್ಯವೇ ಎನ್ನುವ ಜೊತೆಗೆ ಸಂದೇಹ ಕೂಡಾ ಎದುರಾಯಿತು.ಕೇವಲ ಪೆಟ್ರೋಲ್ ಬಂಕುಗಳಲ್ಲಷ್ಟೇ ಕಂಡು ಬರುತ್ತಿದ್ದ ಸ್ವೈಪಿಂಗ್ ಮೆಷಿನ್ ಇದೀಗ ಎಲ್ಲೆಡೆ ಹೆಚ್ಚಾಗತೊಡಗಿದೆ.  ನಿಧಾನವಾಗಿ ಮಂಗಳೂರಿನ ಜನ ಕೂಡಾ ಈ ಮಾಹಿತಿ ತಂತ್ರಜ್ಞಾನದ ವೇಗಕ್ಕೆ ತಕ್ಕಂತೆ ಒಗ್ಗಿಕೊಳ್ಳತೊಡಗಿದ್ದಾರೆ.

ಮಂಗಳೂರಿನ ಬಹುತೇಕ ಪೆಟ್ರೋಲ್ ಪಂಪುಗಳಲ್ಲಿ ಈಗಾಗಲೇ ಸ್ವೈಪಿಂಗ್ ಮೆಷಿನ್ ಉಪಯೋಗಿಸುತ್ತಿದ್ದರೆ, ಇನ್ನು ಬಿಗ್ ಶಾಪಿಂಗ್ ಮಾಲ್‍ಗಳಲ್ಲೂ, ಬಟ್ಟೆಬರೆ ಮಳಿಗೆ, ಮೊಬೈಲ್ ಶಾಪುಗಳಲ್ಲೂ ಇದೀಗ ಸ್ವೈಪಿಂಗ್ ಮೆಷಿನ್ ಉಪಯೋಗ ಹೆಚ್ಚಾಗತೊಡಗಿದೆ. ಹಲವು ಮಂದಿ ಈ ವ್ಯವಸ್ಥೆ ಉತ್ತಮ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ದೇಶಾದ್ಯಂತ ರೈಲ್ವೇಯ 10 ಸಾವಿರ ಕಡೆಗಳಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಮೂಲಕ ಪಿಒಎಸ್ ಯಂತ್ರ ಅಳವಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಣ್ಣೂರು, ಪಯ್ಯನ್ನೂರು, ಕಾಞಂಗಾಡ್, ಮಂಗಳೂರು ಜಂಕ್ಷನ್ ಹಾಗೂ ಲಾಲಭಾಗದಲ್ಲಿರುವ ನೋಂದಣಿ ಕಚೇರಿಯಲ್ಲೂ ಸ್ವೈಪಿಂಗ್ ಮಷನ್ ಅಳವಡಿಸಲಾಗಿದೆ. ಇತ್ತ ಕೆಎಸ್ಸಾರ್ಟಿಸಿ ಬುಕ್ಕಿಂಗಿಗೂ ಇನ್ಮೇಲೆ ಈ ಮಷಿನ್ ಉಪಯೋಗಕ್ಕೆ ಬರಲಿದೆ ಎಂದು ತಿಳಿದುಬಂದಿದೆ.