ಮಂಗಳೂರು-ಶಾರ್ಜಾ ಜೆಟ್ ಏರ್ವೇಸ್ ವಿಮಾನ ರದ್ದು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮಂಗಳೂರು ಮತ್ತು ಶಾರ್ಜಾ ನಡುವೆ ಜೆಟ್ ಏರ್ವೇಸ್ ವಿಮಾನದ ಮೂಲಕ ನೇರಯಾನ ನಡೆಸುತ್ತಿದ್ದ ಪ್ರಯಾಣಿಕರು ಇದೀಗ ಕಂಗೆಟ್ಟಿದ್ದಾರೆ. ಜ 8ರಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಶಾರ್ಜಾ ನಡುವೆ ಸಂಚರಿಸುತ್ತಿದ್ದ ಜೆಟ್ ಏರ್ವೇಸ್ ವಿಮಾನ ಯಾನ ರದ್ದುಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಮಾರ್ಚ್ ಅಂತ್ಯದವರೆಗೂ ಈ ಸೇವೆ ದೊರಕುವುದು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ.

ವಿಮಾನ ರದ್ದುಗೊಂಡ ಹಿನ್ನೆಲೆಯಲ್ಲಿ ಮಂಗಳೂರಿನ ಪ್ರಯಾಣಿಕರು ಇನ್ಮೇಲೆ ಮುಂಬೈಗೆ ತೆರಳಿ ಅಲ್ಲಿಂದ ಶಾರ್ಜಾದ ವಿಮಾನ ಹತ್ತಬೇಕಾಗಿದೆ.

ಮಂಗಳೂರು ಶಾರ್ಜಾ ನಡುವೆ ಪ್ರಯಾಣಕ್ಕೆ ಮುಂದಾಗಿದ್ದ ರಾಜೇಶ್ ಎಂಬವರು, ಟಿಕೆಟ್ ಬುಕ್ಕಿಂಗ್ ಮಾಡಲೆಂದು ವೆಬ್ ಸೈಟ್ ನೋಡಿದಾಗ ಅದರಲ್ಲಿ ಜೆಟ್ ಏರ್ವೇಸ್ ಪೋರ್ಟಲ್ ಮಂಗಳೂರು ಮತ್ತು ಶಾರ್ಜಾ ನಡುವಿನ ವಿಮಾನ ಯಾನಕ್ಕೆ ಬುಕ್ಕಿಂಗ್ ಸೌಲಭ್ಯ ಇಲ್ಲ ಎಂದು ತೋರಿಸಿದೆ.

“ಶಾರ್ಜಾಕ್ಕೆ ತೆರಳಲೆಂದು ನಾನು ಜ 7ರಂದು ಟಿಕೆಟ್ ಬುಕ್ಕಿಂಗ್ ಮಾಡಲು ಮುಂದಾದಾಗ ಅದರಲ್ಲಿ ಪ್ರಯಾಣದ ವೆಚ್ಚ, ವೇಳೆ ಯಾವುದೂ ತೋರಿಸುತ್ತಿಲ್ಲ. ಕೂಡಲೇ ನಾನು ಕಸ್ಟಮರ್ ಕೇರಿಗೆ ಕರೆ ಮಾಡಿದಾಗ ಅವರು ಮಂಗಳೂರು-ಶಾರ್ಜಾ ನಡುವಿನ ವಿಮಾನ ಯಾನ ರದ್ದುಗೊಂಡಿರುವ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ ಮುಂಬೈ ಮೂಲಕ ತೆರಳಿ ಎಂದು ಸಲಹೆ ನೀಡಿದರು. ಅವರ ಉತ್ತರದಿಂದ ಆಕ್ರೋಶಗೊಂಡ ನಾನು `ಈ ಬಗ್ಗೆ ಸಾರ್ವಜನಿಕರಿಗೆ ಯಾಕೆ ಮಾಹಿತಿ ಕೊಟ್ಟಿಲ್ಲ’ ಎಂದು ಪ್ರಶ್ನಿಸಿದಾಗ ಸರಿಯಾದ ಉತ್ತರವನ್ನು ನೀಡದೇ ನುಣುಚಿಕೊಂಡಿದ್ದಾರೆ. ಮತ್ತೆ ನಾನು ಏರಿಯಾ ಮುಖ್ಯಸ್ಥ ಸುಧೀಂದ್ರರನ್ನು ಪ್ರಶ್ನಿಸಿದಾಗ, `ನಾವು ಕಳೆದ ಡಿಸೆಂಬರ್ ತಿಂಗಳಿನಿಂದ ಮಾಹಿತಿ ನೀಡುತ್ತಿದ್ದೇವೆ’ ಎಂದು ತಿಳಿಸಿದ್ದಾರೆ” ಎಂದು ರಾಜೇಶ್ ಹೇಳಿದರು.