ಶಿರಾಡಿ ಘಾಟ್ ರಸ್ತೆ ಹೊರತುಪಡಿಸಿ ಸಂಪೂರ್ಣ ಚತುಷ್ಪಥಗೊಳ್ಳಲಿರುವ ಮಂಗಳೂರು-ನೆಲಮಂಗಲ ಹೆದ್ದಾರಿ

ಸಾಂದರ್ಭಿಕ ಚಿತ್ರ

 ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಶಿರಾಡಿ ಘಾಟ್ ರಸ್ತೆಯ 26 ಕಿ ಮೀ ಹೊರತುಪಡಿಸಿ ಮಂಗಳೂರು ಹಾಗೂ ನೆಲಮಂಗಲ ನಡುವಿನ ಸಂಪರ್ಕ ಕೊಂಡಿಯಾಗಿರುವ ರಾಷ್ಟ್ರೀಯ ಹೆದ್ದಾರಿ 75 ಸಂಪೂರ್ಣವಾಗಿ ಕಾಂಕ್ರಿಟೀಕರಣಗೊಂಡು ಚತುಷ್ಪಥವಾಗಲಿದೆ.

ಈ ಹಿಂದೆ ಸಕಲೇಶಪುರ ಹಾಗೂ ಬಳ್ಳುಪೇಟೆ ನಡುವೆ ಇರುವ ಗುಳಗಳಳೆ ಹಾಗೂ ಮಾರನಹಳ್ಳಿ (ಹೆಗ್ಗದ್ದೆ) ರಸ್ತೆಯನ್ನು ಡಾಮರೀಕರಣಗೊಳಿಸಿ ದ್ವಿಪಥಗೊಳಿಸುವ ಯೋಜನೆಯಿದ್ದರೂ ಈ ರಸ್ತೆಯನ್ನೂ ಕಾಂಕ್ರಿಟೀಕರಣಗೊಳಿಸಿ ಚತುಷ್ಪಥಗೊಳಿಸಲು ಇದೀಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ. ಇದರಿಂದಾಗಿ ಹಾಸನ-ಮಾರನಹಳ್ಳಿ ನಡುವಿನ  ಸಂಪೂರ್ಣ 55 ಕಿ ಮೀ ಉದ್ದದ ರಸ್ತೆ ಚತುಷ್ಪಥವಾಗಲಿದೆ. ಗುಡ್ಡದಿಂದಾವೃತವಾದ ಹಾಗೂ ಹಲವು ಉಬ್ಬುತಗ್ಗುಗಳಿಂದ ಕೂಡಿದ ಪ್ರದೇಶ ಇದಾಗಿರುವುದರಿಂದ ಕಾಂಕ್ರಿಟೀಕರಣ ಬೇಡವೆಂದು ಮೊದಲು ನಿರ್ಧರಿಸಲಾಗಿತ್ತಾದರೂ ರಸ್ತೆಯಲ್ಲಿನ ವಾಹನ ಸಂಚಾರವನ್ನು ಗಮನಿಸಿ ಚತುಷ್ಪಥಗೊಳಿಸಲು ನಿರ್ಧರಿಸಲಾಗಿದೆ. ಶಿರಾಡಿ ಘಾಟಿನಿಂದ ಆರಂಭವಾಗಿ ಮಾರನಹಳ್ಳಿಯಲ್ಲಿ ಅಂತ್ಯವಾಗುವ ಹಸಿರು ಬೈಪಾಸ್ ಗುಂಡ್ಯದಲ್ಲಿ ಅಂತ್ಯವಾಗುವುದರಿಂದ ಎರಡೂ ಕಡೆಗಳಲ್ಲಿ ಚತುಷ್ಪಥ ರಸ್ತೆಯ ಸಂಪರ್ಕ ಅಗತ್ಯವಿದೆ.

ಹಾಸನ ಮತ್ತು ಮಾರನಹಳ್ಳಿಯ ನಡುವಿನ ಚತುಷ್ಪಥ ಕಾಮಗಾರಿ ಗುತ್ತಿಗೆಯನ್ನು ಐಸೊಲಕ್ಸ್ ಕೊರ್ಸನ್ ಎಂಬ ಸಂಸ್ಥೆಗೆ ಇಪಿಸಿ ಮಾದರಿಯನ್ವಯ ವಹಿಸಲಾಗಿದ್ದು ಯೋಜನಾ ವೆಚ್ಚವನ್ನು ರೂ 400 ಕೋಟಿ ಎಂದು ಅಂದಾಜಿಸಲಾಗಿದೆ. ಈಗಾಗಲೇ ಆರಂಭವಾಗಿರುವ ಕಾಮಗಾರಿ ಎರಡು ವರ್ಷಗಳಲ್ಲಿ ಮುಗಿಯಬಹುದು. ಮಾರನಹಳ್ಳಿಯಿದ ಕೆಂಪುಹೊಳೆ ಗೆಸ್ಟ್ ಹೌಸ್ ತನಕದ ಶಿರಾಡಿ ಘಾಟ್ ರಸ್ತೆಯನ್ನು 8.5 ಮೀಟರಿಗೆ ಅಗಲಗೊಳಿಸುವ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಕೆಂಪುಹೊಳೆ ಗೆಸ್ಟ್ ಹೌಸಿನಿಂದ ಅಡ್ಡಹೊಳೆ ತನಕದ ಉಳಿದ 13 ಕಿ ಮೀ ರಸ್ತೆಯ ಕಾಂಕ್ರೀಟೀಕರಣ ಕಾಮಗಾರಿಯ ಗುತ್ತಿಗೆಯನ್ನು ಓಶಿಯನ್ ಕನಸ್ಟ್ರಕ್ಷನ್ಸ್ ಸಂಸ್ಥೆಗೆ ವಹಿಸಲಾಗಿದ್ದರೆ ಅಡ್ಡಹೊಳೆಯಿಂದ ಬಿಸಿ ರೋಡ್ ತನಕದ 66 ಕಿ ಮೀ ರಸ್ತೆಯ ಕಾಮಗಾರಿಯ ಗುತ್ತಿಗೆಯನ್ನು ಎಲ್ & ಟಿಗೆ ರೂ 821 ಕೋಟಿಗೆ ವಹಿಸಲಾಗಿದೆ. ಈ ಯೋಜನೆಗಾಗಿ ಸುಮಾರು 7000 ಮರಗಳನ್ನು ಕಡಿಯಬೇಕಾಗಿದ್ದು, ಇದರ ಭಾಗವಾಗಿ 14.5 ಕಿ ಮೀ ಉದ್ದದ ಸರ್ವಿಸ್ ರಸ್ತೆ, ಎರಡು ಫ್ಲೈಓವರ್ ಹಾಗೂ ಮೇಲ್ಸೇತುವೆಗಳು, 14 ಕಿರು ಸೇತುವೆಗಳು, ಒಂಬತ್ತು ಅಂಡರ್-ಪಾಸುಗಳು ಹಾಗೂ ಟೋಲ್ ಪ್ಲಾಝಾ ನಿರ್ಮಾಣಗೊಳ್ಳಲಿವೆ. ಬಿ ಸಿ ರೋಡಿನಿಂದ ಮಂಗಳೂರು ತನಕದ ರಸ್ತೆ ಈಗಾಗಲೇ ಚತುಷ್ಪಥಗೊಂಡಿದೆ.