ಕೋಟ್ಯಂತರ ರೂ ನಷ್ಟದಲ್ಲಿ ಕೆಎಸ್ಸಾರ್ಟಿಸಿ ನಗರ ವಿಭಾಗ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಗಳೂರು ವಿಭಾಗವು 2016-2017ನೇ ಅವಧಿಯಲ್ಲಿ ರೂ 21.21 ಕೋಟಿ ನಷ್ಟದಲ್ಲಿದೆ. ಆಡಳಿತದಲ್ಲಿ ಸಡಿಲಿಕೆ ಮತ್ತು ಖಾಸಗಿ ಬಸ್ ನಿರ್ವಾಹಕರ ಕಾನೂನುಬಾಹಿರ ಕಾರ್ಯಾಚರಣೆಗಳೇ ಈ ನಷ್ಟದ ಹಿಂದಿರುವ ಕಾರಣಗಳು ಎಂದು ಬಾಳೆಹೊನ್ನೂರು ಮೂಲದ ಆರ್ಟಿಐ ಕಾರ್ಯಕರ್ತ ಶಂಕರನಾರಾಯಣ ಭಟ್ ಮಾಹಿತಿ ಹಕ್ಕು ಕಾಯ್ದೆಯಡಿ ಸಂಗ್ರಹಿಸಿದ ಮಾಹಿತಿಗಳು ತಿಳಿಸಿವೆ.

ಕೆಸ್ಸಾರ್ಟಿಸಿ ಬಸ್ ಕಾರ್ಯಾಚರಣೆಯಲ್ಲಿ ಶಿಸ್ತು ಇಲ್ಲ,್ಲ ಅನಿಯಮಿತ ಸಮಯದ ಕಾರ್ಯಾಚರಣೆ ಪ್ರಯಾಣಿಕರಿಗೆ ಅನುಕೂಲಕರವಾಗಿಲ್ಲ. ಹಲವು ಬಸ್ಸುಗಳಲ್ಲಿ ಸಮರ್ಪಕ ನಿರ್ವಹಣೆಯಿಲ್ಲ, ಇದು ಕೂಡ ಪ್ರಯಾಣಿಕರನ್ನು ಆಕರ್ಷಿಸುವಲ್ಲಿ ವಿಫಲಗಿದೆ. ಇನ್ನೊಂದೆಡೆಯಲ್ಲಿ ಖಾಸಗಿ ಬಸ್ ನಿರ್ವಾಹಕರ ಕಾನೂನುಬಾಹಿರ ಕಾರ್ಯಾಚರಣೆಯನ್ನು ಹತ್ತಿಕ್ಕುವಲ್ಲಿ ಸಾರಿಗೆ ಇಲಾಖೆ ವಿಫಲವಾಗಿದೆ. ಖಾಸಗಿ ಬಸ್ಸುಗಳು ಬೆಂಗಳೂರು ಮತ್ತು ಹುಬ್ಬಳ್ಳಿ ಸೇರಿದಂತೆ ರಾಷ್ಟ್ರೀಕೃತ ರಸ್ತೆಗಳಲ್ಲಿ ಟೂರಿಸ್ಟ್ ಬಸ್ಸುಗಳನ್ನು ಕಾರ್ಯಾಚರಿಸುತ್ತಿವೆ. ಇದು ಕೆಸ್ಸಾರ್ಟಿಸಿ ಬಸ್ಸುಗಳ ಗಳಿಕೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ಭಟ್ ಹೇಳಿದ್ದಾರೆ.

ಆದರೆ ಆಡಳಿತದ ಸಡಿಲಿಕೆ ನಷ್ಟಕ್ಕೆ ಕಾರಣ ಎಂಬುದನ್ನು ನಿರಾಕರಿಸಿರುವ ಕೆಸ್ಸಾರ್ಟಿಸಿ ಮೂಲಗಳು ತನ್ನದೇ ಎರಡು ಪ್ರಮುಖ ಕಾರಣಗಳನ್ನು ನೀಡಿವೆ. ಅವುಗಳೆಂದರೆ ಕೆಸ್ಸಾರ್ಟಿಸಿ ಉದ್ಯೋಗಿಗಳ ಸಂಬಳ ಹೆಚ್ಚಿಸಿರುವುದರಿಂದ ಕಾರ್ಯಾಚರಣೆ ವೆಚ್ಚ ಹೆಚ್ಚಳ, ಅದೇ ರೀತಿ ಡೀಸೆಲ್ ದರ ಹೆಚ್ಚಳ ಮತ್ತು ಖಾಸಗಿ ಬಸ್ ನಿರ್ವಾಹಕರ ಕಾನೂನುಬಾಹಿರ ಕಾರ್ಯಾಚರಣೆ ನಷ್ಟಕ್ಕೆ ಕಾರಣ ಎಂದುತಿಳಿಸಿದೆ.

ಮೂಲಗಳ ಪ್ರಕಾರ ಖಾಸಗಿ ಪ್ರವಾಸಿ ಬಸ್ಸುಗಳು ಕುಂದಾಪುರ, ಉಡುಪಿ ಮತ್ತು ಮಂಗಳೂರಿನಿಂದ ಬೆಂಗಳೂರು ಮತ್ತು ಇತರ ಕಡೆಗಳಿಗೆ ಪ್ರಯಾಣಿಕರ ಬಸ್ಸಿನಂತೆ ಓಡಾಟ ನಡೆಸುತ್ತಿವೆ. ಪರಿಣಾಮವಾಗಿ ಕೆಸ್ಸಾರ್ಟಿಸಿ ಮಲ್ಟಿಪ್ಲೆಕ್ಸ್ ಹವಾ ನಿಯಂತ್ರಿತ ಪ್ರೀಮಿಯಂ ಸೇವೆಗಳು, ಅದೇ ರೀತಿ ರಾಜಹಂಸ ಸೇವೆಗಳ ಮೇಲೆ ಪರಿಣಾಮ ಬೀರಿದೆ.

ಕೆಸ್ಸಾರ್ಟಿಸಿ ಬಸ್ ನಿಲ್ದಾಣಗಳಿಂದ ಪ್ರಯಾಣಿಕರನ್ನು ಕರೆದೊಯ್ಯುವುದರಿಂದ ಖಾಸಗಿ ಬಸ್ಸುಗಳಿಗೆ ನಿಷೇಧ ಹೇರಿದ್ದರೂ ಖಾಸಗಿ ಬಸ್ಸುಗಳು ರಾಜಾರೋಷವಾಗಿ ಪ್ರಯಾಣಕರನ್ನು ಪಿಕ್ ಮಾಡುತ್ತಿವೆ ಎಂದು ಕೆಸ್ಸಾರ್ಟಿಸಿ ಮೂಲಗಳು ತಿಳಿಸಿವೆ.