ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಸೌಕರ್ಯ ಕೊರತೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಬಹುತೇಕ ಸೌಲಭ್ಯಗಳಿದ್ದರೂ ಜಂಕ್ಷನ್ ರೈಲು ನಿಲ್ದಾಣ ಮಾತ್ರ ಇನ್ನೂ ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿದೆ. ಇಲ್ಲಿ ಬಹಳಷ್ಟು ಅಭಿವೃದ್ಧಿ ಯೋಜನೆಗಳನ್ನೂ ರೂಪಿಸಬಹುದಾದರೂ ರೈಲ್ವೇ ಇಲಾಖೆ, ಸಂಸದ, ಅಧಿಕಾರಿಗಳು ಇದರತ್ತ ಮನಸ್ಸು ಮಾಡುತ್ತಿಲ್ಲ. ಹೀಗಾಗಿ ಜಂಕ್ಷನ್ ರೈಲು ನಿಲ್ದಾಣ ಕೇವಲ ರೈಲುಗಳು ಬಂದು ನಿಲ್ಲಲು, ಇಲ್ಲಿಂದ ಹೋಗಲು ಎಂಬಂತಾಗಿದೆ.

ಮಂಗಳೂರು-ಬಾಂಬೆಗೆ ತೆರಳುವ ಲೋಕಮಾನ್ಯ ತಿಲಕ್ ಮತ್ಸ್ಯಗಂಧ ಎಕ್ಸಪ್ರೆಸ್, ಮಂಗಳೂರು-ಕಾರವಾರಕ್ಕೆ ತೆರಳುವ ಕಾರವಾರ ರೈಲು, ಮಂಗಳೂರು-ಗೋವಾಕ್ಕೆ ಹೋಗುವ ಇಂಟರಸಿಟಿ ರೈಲುಗಳಿಗೆ ಇಲ್ಲಿ ಸ್ಟಾಪ್ ಇಲ್ಲ.

ಮುಖ್ಯವಾಗಿ ರೈಲು ನಿಲ್ದಾಣವನ್ನು ಸಂಪರ್ಕಿಸುವ ರಸ್ತೆ ಅತ್ಯಂತ ಕಿರಿದಾಗಿದ್ದು, ಖಾಸಗಿ ರಸ್ತೆ ಮೂಲಕ ಪ್ರಯಾಣಿಕರು ಸಂಚರಿಸಬೇಕಾಗಿದೆ. ಅಲ್ಲದೆ ನೇರ ಬಸ್ ಸಂಪರ್ಕವೂ ಇಲ್ಲ. ಸುತ್ತುಬಳಸಿ ಬಸ್ಸಿನಲ್ಲಿ ಹೋದರೂ ಅಲ್ಲಿಂದ ನಡೆದು ನಿಲ್ದಾಣ ತಲುಪಬೇಕಾದ ದುಃಸ್ಥಿತಿ ಇದೆ. ಇದನ್ನೇ ಮುಂದಿಟ್ಟುಕೊಂಡು ರಿಕ್ಷಾ ಚಾಲಕರು ಇಲ್ಲಿ ಕೇಳಿದಷ್ಟು ಬಾಡಿಗೆ ಕೊಟ್ಟು ಸಂಚರಿಸಬೇಕಾದ ಕಷ್ಟ ಪ್ರಯಾಣಿಕರದ್ದು. ಸದ್ಯ ಇಲ್ಲಿ ಜಿಲ್ಲಾಡಳಿತ ಪ್ರೀಪೇಯ್ಡ್ ಕೌಂಟರ್ ಮಾಡುವ ಮೂಲಕ ಸಮಸ್ಯೆಯನ್ನು ನಿವಾರಿಸಿದೆ. ಪುರುಷ ಮತ್ತು ಮಹಿಳಾ ಪ್ರಯಾಣಿಕರಿಗೆ ವಿಶ್ರಾಂತಿಗಾಗಿ ಕೊಠಡಿ ಇಲ್ಲ. ಒಂದೇ ಕೊಠಡಿಯಲ್ಲಿ ಎಲ್ಲರೂ ಇರಬೇಕಾಗಿದೆ. ತುರ್ತಾಗಿ ಹಣ ಡ್ರಾ ಮಾಡಬೇಕಾದರೆ ಎಲ್ಲೂ ಎಟಿಎಂ ಕೇಂದ್ರಗಳಿಲ್ಲ. ನಿಲ್ದಾಣದ ಮೂರು ಫ್ಲಾಟ್ ಫಾರಂಗಳಲ್ಲಿ ಪೂರ್ಣವಾದ ಮೇಲ್ಛಾವಣಿ ಇಲ್ಲ. ಇಪ್ಪತ್ನಾಲ್ಕು ಬೋಗಿಗಳಿರುವ ರೈಲಿನ ಕೇವಲ 12 ಬೋಗಿಗಳು ನಿಲ್ಲುವ ಜಾಗಕ್ಕಷ್ಟೇ ಮೇಲ್ಛಾವಣಿ ಕಲ್ಪಿಸಲಾಗಿದೆ. ಪ್ರಯಾಣಿಕರಿಗೆ ಮಳೆ-ಬಿಸಿಲಿನಿಂದ ರಕ್ಷಿಸಿಕೊಳ್ಳಲು ಪರ್ಯಾಯ ವ್ಯವಸ್ಥೆ ಇಲ್ಲ. ಸ್ಪಷ್ಟವಾಗಿ ಕನ್ನಡ ಮಾತನಾಡಬಲ್ಲ ಸಿಬ್ಬಂದಿ ಕೂಡ ಇಲ್ಲಿಲ್ಲ.  “ಇಲ್ಲಿ ಹಲವು ಸಮಸ್ಯೆಗಳನ್ನು ಬಗೆಹರಿಸುವಂತೆ ನಾವು ಹಲವು ಬಾರಿ ಹೋರಾಟ ನಡೆಸಿದ್ದೇವೆ. ಸದ್ಯಕ್ಕೆ ಇಲ್ಲಿ ಪ್ರೀಪೇಯ್ಡ್ ಕೌಂಟರ್ ಮಾಡಿದ್ದಾರೆ. ಆದರೆ ಉಳಿದ ಸೌಕರ್ಯಕ್ಕೆ ಮತ್ತೆ ಹೋರಾಟ ಮಾಡಬೇಕಾಗಿದೆ” ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ವಾಸುದೇವ.