ಅಭದ್ರತೆಯಲ್ಲಿ ಮಂಗಳೂರು ಜೈಲು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ರಾಜ್ಯ ಬಂಧಿಖಾನೆಗಳ ನಿಯಮಗಳ ಪ್ರಕಾರ ಜೈಲಿನ ಸುತ್ತಮುತ್ತ ಯಾವುದೇ ಭಾರೀ ಕಟ್ಟಡಗಳು ಇರಬಾರದು. ಜೈಲಿನ ಆವರಣ ಗೋಡೆಯಿಂದ 100 ಮೀಟರ್ ದೂರದಲ್ಲಿ ಕಟ್ಟಡಗಳು ಇರಬಾರದು. ಗೈಡ್ ಲೈನ್ಸ್ ಪ್ರಕಾರ ಯಾವುದೇ ಭಾರೀ ಕಟ್ಟಡಗಳನ್ನು ಕಟ್ಟುವುದಕ್ಕೆ ಅವಕಾಶ ಇಲ್ಲ. ನಗರ ಪ್ರದೇಶದಲ್ಲಿ ಜೈಲು ಇರಲೇಬಾರದು ಎನ್ನುವ ನಿಯಮಗಳೂ ಇವೆ. ಆದರೆ ಈ ಯಾವುದೇ ನಿಯಮಗಳೂ ಮಂಗಳೂರು ಜೈಲಿಗೆ ಅನ್ವಯವಾಗುವುದೇ ಇಲ್ಲ. ಯಾಕೆಂದರೆ ಇಲ್ಲಿ ಎಲ್ಲಾ ನಿಯಮಗಳನ್ನೂ ಸಾರಾಸಗಟಾಗಿ ತಿರಸ್ಕರಿಸಲಾಗಿದೆ.

ಮಂಗಳೂರಿನ ಜೈಲಿನ ಬಳಿ ಸುಳಿದವರಿಗೆ ಈ ವಿಚಾರ ಗೊತ್ತಾಗಬಹುದು. ಕೈದಿಗಳ ಭದ್ರತೆ ಮತ್ತು ಅವರು ತಪ್ಪಿಸಿಕೊಳ್ಳಬಾರದು ಎನ್ನುವ ಹಿನ್ನೆಲೆಯಲ್ಲಿ ಹಲವು ಕಾನೂನುಗಳನ್ನು ಜಾರಿಗೊಳಿಸಲಾಗಿದೆ. ಆದರೆ ಇಲ್ಲಿ  ಅದ್ಯಾವುದೂ ಪಾಲನೆ ಆಗಿಲ್ಲ. ಕೊಡಿಯಾಲಬೈಲಿನಲ್ಲಿನ ಹೃದಯ ಭಾಗದಲ್ಲೇ ಇರುವ ಜೈಲಿನ ಆವರಣದ ಸುತ್ತಮುತ್ತ ಬೃಹತ್ ಐಷಾರಾಮಿ ಹೋಟೆಲುಗಳು, ವಸತಿ ಕಟ್ಟಡಗಳು ತಲೆ ಎತ್ತಿವೆ. ಜೈಲಿಗಿಂತಲೂ ಎತ್ತರ ಕಟ್ಟಡಗಳ ಮೇಲೇರಿ ನೋಡಿದರೆ ಜೈಲಿನ ಆವರಣದೊಳಗೆ ಇರುವ ಕೈದಿಗಳು ಏನು ಮಾಡುತ್ತಾರೆ ಎನ್ನುವುದು ಸ್ಪಷ್ಟವಾಗಿ ಕಾಣುತ್ತದೆ. ಇದಲ್ಲದೇ ಜೈಲಿನ ಆವರಣವನ್ನು ತಾಗಿಕೊಂಡೇ ಮತ್ತು ಸುತ್ತಮುತ್ತಲೂ 4 ಶಿಕ್ಷಣ ಸಂಸ್ಥೆಗಳೂ ಇವೆ. ಇದನ್ನೂ ಕಾನೂನು ಗಾಳಿ ತೂರಿ ನಿರ್ಮಿಸಲಾಗಿದೆ ಎನ್ನುವುದು ಸ್ಪಷ್ಟವಾಗಿದೆ. ನಗರದ ಹೊರಭಾಗಕ್ಕೆ ಜೈಲನ್ನು ಸ್ಥಳಾಂತರ ಮಾಡಬೇಕೆನ್ನುವ ಬೇಡಿಕೆ ಬಹಳ ಸಮಯಗಳಿಂದ ಕೇಳಿ ಬರುತ್ತಿದೆಯಾದರೂ ಅದಕ್ಕೆ ಹತ್ತು ಹಲವು ತಾಂತ್ರಿಕ ಸಮಸ್ಯೆಗಳು ಎದುರಾಗಿವೆ.

ಮಂಗಳೂರು ಜೈಲಿನೊಳಗೆ ಕೇವಲ 210 ಕೈದಿಗಳನ್ನು ಮಾತ್ರ ನಿರ್ವಹಣೆ ಮಾಡಬಹುದಾಗಿದೆ. ಆದರೆ ಇಲ್ಲಿ ಬರೋಬ್ಬರಿ 400ಕ್ಕಿಂತಲೂ ಅಧಿಕ ಕೈದಿಗಳಿದ್ದಾರೆ. ಒಬ್ಬ ಜೈಲು ಅಧೀಕ್ಷಕ ಸೇರಿದಂತೆ ಇರುವುದು ಕೇವಲ 25 ಸಿಬ್ಬಂದಿಗಳು. ಇವರನ್ನು ನಿರ್ವಹಿಸುವುದು ಇಲ್ಲಿನ ಬೆರಳೆಣಿಕೆಯ ಸಿಬ್ಬಂದಿಗಳಿಗೆ ಹರಸಾಹಸವೇ ಆಗಿದೆ. ಕೆಲವು ವರ್ಷಗಳ ಹಿಂದೆ ಕೊಲೆ ಆರೋಪಿಗಳಾಗಿ ಗುರುತಿಸಿಕೊಂಡಿದ್ದ ಕುಖ್ಯಾತ ಕ್ರಿಮಿನಲ್ಲುಗಳಾದ ಭಾಸ್ಕರನ್ ನಾಯರ್, ಆಕಾಶಭವನ್ ಇಬ್ರಾಹಿಂ, ಮಿಲಿಟರಿ ಅಶ್ರಫ್, ಮೋಹನ್ ಆಲಿಯಾಸ್ ಬಾರ್ ಬೆಂಡÀರ್ ಮೋಹನ್ ಇದೇ ಜೈಲಿನಿಂದ ಪರಾರಿಯಾಗಿದ್ದರು. ಬಳಿಕ ಪೊಲೀಸರು ಅವರನ್ನು ಕಾರ್ಯಾಚರಣೆ ಮೂಲಕ ಬಂಧಿಸಿದ್ದರು. ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಅತ್ಯಾಚಾರ ಆರೋಪಿ ಬೆಳ್ತಂಗಡಿ ನಿವಾಸಿ ಜಿನ್ನಪ್ಪ ಪರವ ಎಂಬಾತನೂ ಪರಾರಿಯಾಗಿದ್ದ. ಇನ್ನೂ ಆಶ್ಚರ್ಯಕರ ಸಂಗತಿ ಅಂದರೆ ಜಿನ್ನಪ್ಪ ಪರವ, ಜೈಲಿನ ಭದ್ರತೆಗಾಗಿ ನಿಯೋಜಿಸಲಾಗಿದ್ದ ಕರ್ನಾಟಕ ಇಂಡಸ್ಟ್ರೀಯಲ್ ಸೆಕ್ಯೂರಿಟಿ ಫೋರ್ಸ್ (ಕೆ ಐ ಎಸ್ ಎಫ್) ಕಣ್ಣು ತಪ್ಪಿಸಿ, ಅವರು ನಿದ್ದೆ ಮಂಪರಿನಲ್ಲಿದ್ದಾಗ ಹೊರಬಂದು ಗೋಡೆ ಮೇಲೇರಿ ಜಂಪ್ ಮಾಡಿ ರಾತ್ರಿ ವೇಳೆ ಪರಾರಿಯಾಗಿದ್ದ..! ವಾರದ ಬಳಿಕ ಈತನನ್ನೂ ಪೊಲೀಸರು ಬಂಧಿಸಿದ್ದರು. ಜೋಡಿ ಕೊಲೆ ನಡೆದಿದೆ. ಕೈದಿಗಳ ನಡುವೆ ಮಾರಾಮಾರಿ ನಡೆಯುತ್ತಲೇ ಇದೆ.

ಜೈಲಿನ ಒಳಗಡೆ ಮತ್ತು ಹೊರಭಾಗದಲ್ಲಿ ಕೈದಿಗಳ ಚಲನವಲನಗಳ ಮೇಲೆ ನಿಗಾ ಇರಿಸಲು ಬರೋಬ್ಬರಿ 30 ಸೀಸಿ ಟೀವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದಲ್ಲದೇ ಮಾರಕಾಸ್ತ್ರಗಳನ್ನು ತಾರದಂತೆ, ಅಪಾಯಕಾರಿ ಸ್ಫೋಟಕ, ವಸ್ತುಗಳನ್ನು ಒಳತರದಂತೆ ಸ್ಕ್ರೀನಿಂಗ್ ಮೆಷಿನ್ ಕೂಡಾ ಅಳವಡಿಸಲಾಗಿದೆ. ಹೀಗಿದ್ದರೂ ಪೊಲೀಸರ ದಾಳಿ ವೇಳೆಯಲ್ಲಿ ಜೈಲಿನೊಳಗಡೆ ಗಾಂಜಾ, ಅಫೀಮು, ಚರಸ್ಸಿನಂತಹ ಮಾದಕ ದ್ರವ್ಯ, ಚಾಕು, ಚೂರಿ, ಮೊಬೈಲ್, ಸಿಮ್ಮುಗಳು, ಮೊಬೈಲ್ ಚಾರ್ಜರ್ ಸಿಗುತ್ತಲೇ ಇರುವುದು ದುರಂತದ ಸಂಗತಿ. ಇಲ್ಲಿ ಮೊಬೈಲ್ ಜಾಮರ್ ಅಳವಡಿಸಲಾಗಿದ್ದರೂ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.