ಮುಸ್ಲಿಂ ವಿದ್ಯಾರ್ಥಿನಿಯರಿಗೆ ರಾಖಿ ಕಟ್ಟಿದ ವಿದ್ಯಾರ್ಥಿಗಳು

ಫೇಸ್ಬುಕ್, ವಾಟ್ಸಪ್ಪಲ್ಲಿ ಆಕ್ಷೇಪ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕಷ್ಟಕಾಲದಲ್ಲಿ ತನ್ನ ಸಹೋದರ ತನಗೆ ಸಹಾಯ ಮಾಡಲೆಂದು ರಾಖಿ ಕಟ್ಟಿ ಅಣ್ಣನ ಹರಸುವುದು ರಕ್ಷಾ ಬಂಧನದ ವಿಶೇಷ. ಕೇವಲ ಹಿಂದೂ ಸಂಪ್ರದಾಯದಲ್ಲಷ್ಟೇ ಕಂಡು ಬರುವ ಈ ರಾಖಿ ಹಬ್ಬಕ್ಕೆ ಮುಸಲ್ಮಾನರು ಅಷ್ಟು ಮಹತ್ವ ನಿಡುವುದಿಲ್ಲ. ಆದರೆ ಮಂಗಳೂರಿನ ಕಾಲೇಜೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರೂ ಹುಡುಗರಿಂದ ರಾಖಿ ಕಟ್ಟಿಸಿಕೊಂಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.

ಭ್ರಾತೃತ್ವ ಸಾರುವ ರಕ್ಷಾಬಂಧನ ಕಾರ್ಯಕ್ರಮ ಆಗಸ್ಟ್ 7ರಂದು ದೇಶಾದ್ಯಂತ ನಡೆದಿತ್ತು. ಮಂಗಳೂರಿನ ಕಾಲೇಜಿನ ಕ್ಯಾಂಪಸ್ಸಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಕಾಲೇಜು ಯುವಕರು ರಾಖಿ ಕಟ್ಟುವ ಫೆÇೀಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಈ ಬಗ್ಗೆ ಫೇಸ್ಬುಕ್ ಪೇಜಿನಲ್ಲಿ ರಕ್ಷಾಬಂಧನದ ಬಗ್ಗೆ ಆಕ್ಷೇಪಾರ್ಹ ಸಂದೇಶವೊಂದು ಪ್ರಕಟವಾಗಿದೆ. “ಲೌಕಿಕ ಶಿಕ್ಷಣ ವ್ಯವಸ್ಥೆಯಲ್ಲಿ ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳು ಎತ್ತ ಸಾಗುತ್ತಿದ್ದಾರೆ ? ಇಸ್ಲಾಂ ಕಲಿಸಿದ ತತ್ವಾದರ್ಶ ಗಾಳಿಗೆ ತೂರಿ ಹಿಂದೂ ಯುವಕರ ಮುಂದೆ ಕೈ ಚಾಚಿ ರಾಖಿ ಕಟ್ಟಿಸಿಕೊಳ್ಳುವ ಇವರು ಮುಸ್ಲಿಮರೇ ?!” ಎಂಬಿತ್ಯಾದಿಯಾಗಿ ಪ್ರಶ್ನಿಸಲಾಗಿದೆ.

“ಆ ಯುವಕರು ಮುಸ್ಲಿಂ ಯುವತಿಯರ ಕೈಗೆ ರಾಖಿ ಕಟ್ಟುವ ಅವಶ್ಯಕತೆಯಾದರು ಏನು ? ಇವರಿಗೆ ರಾಖಿ ಕಟ್ಟಲು ಹಿಂದೂ ಯುವತಿಯರು ಇಲ್ಲವೇ ?” ಎಂದು ಟೀಕಿಸಿದ್ದು, “ಹಿಂದೂಗಳು ರಾಖಿ ಕಟ್ಟುತ್ತೇವೆಂದ ತಕ್ಷಣ ಕಟ್ಟಿಸಿಕೊಂಡಿರುವ ಇವರಿಗೆ ಕನಿಷ್ಠ ತಾವು ಮುಸ್ಲಿಂ ಅನ್ನುವ ಮಾನಸಿಕ ಸ್ಥಿರತೆ ಇದೆಯಾ ? ಇವರೇನು ಮಾನಸಿಕ ಅಸ್ವಸ್ಥರೇ ?!” ಹೀಗೆ ಹುಚ್ಚಾಬಟ್ಟೆ ಟೀಕಾಪ್ರಹಾರದ ಸಂದೇಶ ಆಗಸ್ಟ್ 10ರಂದು ಪ್ರಕಟವಾಗಿದ್ದು, ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ.