ಹೊರರೋಗಿ ವಿಭಾಗ ಮುಚ್ಚಿದ ಮಂಗಳೂರು ವೈದ್ಯರು

ಐಎಂಎ ಭವನದಲ್ಲಿ ಪ್ರತಿಭಟನಾ ಸಭೆ ನಡೆಸಿದ ಮಂಗಳೂರು ವೈದ್ಯರು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆ ನಡೆಸಿ ಗೂಂಡಾಗಿರಿ ಪ್ರದರ್ಶಿಸಿದ ಉತ್ತರ ಕನ್ನಡ ಸಂಸದ ಅನಂತ್ ಹೆಗಡೆಯನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ವೈದ್ಯರು ಶನಿವಾರ ಬೃಹತ್ ಪ್ರತಿಭಟನೆ ನಡೆಸಿದರು.

ಮಧ್ಯಾಹ್ನ 2 ಗಂಟೆಯವರೆಗೆ ನಗರದ ಎಲ್ಲ ಆಸ್ಪತ್ರೆಗಳಲ್ಲಿ ಹೊರರೋಗಿ ವಿಭಾಗವನ್ನು ಮುಚ್ಚಿ ವೈದ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಎಲ್ಲ ವೈದ್ಯರು ಹಾಗೂ ವೈದ್ಯಕೀಯ ಸಂಸ್ಥೆಗಳು ಪ್ರತಿಭಟನೆಗೆ ಬೆಂಬಲ ಘೋಷಿಸಿದ್ದರು.

ಭಾರತೀಯ ವೈದ್ಯಕೀಯ ಸಂಘ, ಅಸೋಸಿಯೇಶನ್ ಆಫ್ ಮೆಡಿಕಲ್ ಕನ್ಸಲ್ಟೆಂಟ್ಸ್ ಮತ್ತಿತರ ವೈದ್ಯಕೀಯ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಐಎಂಎ ಭವನದಲ್ಲಿ ಪ್ರತಿಭಟನಾ ಸಭೆ ನಡೆಸಿ, ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

“ರೋಗಿಯನ್ನು ಸಾವಿನ ದವಡೆಯಿಂದ ಪಾರು ಮಾಡುವ ವೈದ್ಯ ವೃತ್ತಿ ಪವಿತ್ರವಾದದ್ದು, ಆದರೆ ಇಂದು ಇಂಥ ವೈದ್ಯರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚುತ್ತಿದ್ದು, ವೈದ್ಯರು ನಿರ್ಭೀತಿಯಿಂದ ಕಾರ್ಯನಿರ್ವಹಿಸುವುದು ಅಸಾಧ್ಯವಾಗಿದೆ” ಎಂದು ಮನವಿಪತ್ರದಲ್ಲಿ ವಿವರಿಸಲಾಗಿದೆ.

“ಕಾನೂನು ರಚಿಸುವ ಹೊಣೆ ಹೊಂದಿರುವ ಸಂಸದರೇ ಕಾನೂನು ಕೈಗೆತ್ತಿಕೊಂಡು ಗೂಂಡಾಗಿರಿ ಪ್ರದರ್ಶಿಸಿರುವುದು ನಾಚಿಕೆಗೇಡು ಹಾಗೂ ಖಂಡನೀಯ. ಕೀಲು ಶಸ್ತ್ರಚಿಕಿತ್ಸಾ ತಜ್ಞ ಡಾ ಮಧುಕೇಶ್ವರ ಹಾಗೂ ಅವರ ಸಹೋದ್ಯೋಗಿಗಳ ಮೇಲೆ ಶಿರಸಿಯ ಟಿ ಎಸ್ ಎಸ್ ಆಸ್ಪತ್ರೆಯಲ್ಲಿ ಸಂಸದ ಹಲ್ಲೆ ನಡೆಸಿರುವ ಹೇಯ ಕೃತ್ಯವನ್ನು ಇಡೀ ವೈದ್ಯ ಸಮುದಾಯ ಒಕ್ಕೊರಲಿನಿಂದ ಖಂಡಿಸುತ್ತದೆ” ಎಂದು ಪ್ರತಿಭಟನಾನಿರತ ವೈದರು ಸ್ಪಷ್ಟಪಡಿಸಿದರು.

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಮಕ್ಕಳ ರೋಗ ತಜ್ಞರಿಗೆ ಆಡಳಿತ ಪಕ್ಷದ ಶಾಸಕ ಹಲ್ಲೆ ನಡೆಸಿದ್ದರು. ಬಳಿಕ ಇವರನ್ನು ಸಚಿವರನ್ನಾಗಿ ನೇಮಕ ಮಾಡಲಾಯಿತು. ಇವೆಲ್ಲವೂ ವ್ಯವಸ್ಥಿತ ಹಾಗೂ ಉದ್ದೇಶಪೂರ್ವಕ ಕೃತ್ಯಗಳು. ಇಂಥ ಕೃತ್ಯ ಎಸಗುವವರನ್ನು ಮಟ್ಟಹಾಕಿ ಮುಕ್ತವಾಗಿ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು ಎಂದು ವೈದ್ಯರು ಒತ್ತಾಯಿಸಿದರು.

ಪುತ್ತೂರಲ್ಲೂ ವೈದ್ಯರು ಸಾಂಕೇತಿಕ ಪ್ರತಿಭಟನೆ ನಡೆಸಿ ಸಹಾಯಕ ಕಮಿಷನರಿಗೆ ಮನವಿ ಸಲ್ಲಿಸಿದರು.