ಜ 16ರಿಂದ ಮಂಗಳೂರು – ದೆಹಲಿ ನೇರ ವಿಮಾನ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮಂಗಳೂರು ಹಾಗೂ ಹೈದರಾಬಾದ್ ನಡುವೆ  ಶನಿವಾರ ನೇರ ವಿಮಾನ ಸೇವೆ ಆರಂಭಿಸಿದ ಜೆಟ್ ಏರ್ವೇಸ್, ಜನವರಿ 16ರಿಂದ ಮಂಗಳೂರು-ದೆಹಲಿ ನಡುವೆ ನೇರ ವಿಮಾನ ಸೌಲಭ್ಯ ಒದಗಿಸಲಿದೆ.

ಇಲ್ಲಿಯತನಕ ಮಂಗಳೂರಿನಿಂದ ರಾಷ್ಟ್ರ ರಾಜಧಾನಿಗೆ ವಿಮಾನ ಮೂಲಕ ತೆರಳಬಯಸುವವರು ಬೆಂಗಳೂರು ಅಥವಾ ಮುಂಬೈಗೆ ತೆರಳಿ ಅಲ್ಲಿಂದ ದೆಹಲಿಗೆ ಪ್ರಯಾಣಿಸಬೇಕಿತ್ತಲ್ಲದೆ ಪ್ರಯಾಣದ ಅವಧಿ 10 ಗಂಟೆಗಳತನಕ ಆಗುತ್ತಿತ್ತು.

ಆದರೆ ನೇರ ವಿಮಾನ ಸೌಲಭ್ಯದಿಂದ ಮಂಗಳೂರಿನಿಂದ ದೆಹಲಿಗೆ ಕೇವಲ ಎರಡು ಗಂಟೆ 50 ನಿಮಿಷಗಳಲ್ಲಿ ತಲುಪಬಹುದಾಗಿದೆ. ಜೆಟ್ ಏರ್ವೇಸ್ ಬೋಯಿಂಗ್ 737 ವಿಮಾನವನ್ನು ಮಂಗಳೂರು-ದೆಹಲಿ ನಡುವೆ ಬಳಸಲಿದೆ ಎಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ದೇಶಕ  ಜೆ ಟಿ ರಾಧಾಕೃಷ್ಣ ತಿಳಿಸಿದ್ದಾರೆ.

ವಿಮಾನ ಸಂಖ್ಯೆ 9 ಡಬ್ಲ್ಯು 763  ಮಂಗಳೂರಿನಿಂದ ಬೆಳಿಗ್ಗೆ 8 ಗಂಟೆಗೆ ನಿರ್ಗಮಿಸಿದರೆ 10.50ಕ್ಕೆ ದೆಹಲಿ ತಲುಪಲಿದ್ದು, ಅಲ್ಲಿಂದ ವಿಮಾನ ಸಂಖ್ಯೆ 9 ಡಬ್ಲ್ಯು 764  ಮಧ್ಯಾಹ್ನ 3 ಗಂಟೆಗೆ ನಿರ್ಗಮಿಸಿ ಸಂಜೆ 5.50ಕ್ಕೆ ಮಂಗಳೂರು ತಲುಪಲಿದೆ.

ಉದ್ಘಾಟನಾ ವಿಮಾನ ಸೇವೆಗಳಲ್ಲಿ ಜೆಟ್ ಏರ್ವೇಸ್  ದೆಹಲಿಯಿಂದ ಮಂಗಳೂರಿಗೆ ಪ್ರಯಾಣ ದರವನ್ನು ರೂ 4,823 ಹಾಗೂ ಮಂಗಳೂರಿನಿಂದ ದೆಹಲಿಗೆ ರೂ 4,664  ನಿಗದಿಪಡಿಸಿದೆ.