ಸರ್ವ ಧಮೀಯರಲ್ಲಿ ಸೌಹಾರ್ದತೆಗೆ ಒತ್ತು ನೀಡಿದ ಮಂಗಳೂರು ಬಿಷಪ್

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : “ಸಾಮಾಜಿಕ ಸೌಹಾರ್ದತೆ, ಪರಸ್ಪರ ಪ್ರೀತಿ ಸಹಕಾರದಿಂದ ಮಾತ್ರ ಸಮಾಜದ ಅಭಿವೃದ್ದಿ ಸಾಧ್ಯ. ಇದಕ್ಕಾಗಿ ಎಲ್ಲರ ಪಾಲ್ಗೊಳ್ಳುವಿಕೆ ಅಗತ್ಯ. ಗುರು ದೀಕ್ಷೆಯ ಸುವರ್ಣ ಮಹೋತ್ಸವ ಸಮಾರಂಭ ಕೇವಲ ಸನ್ಮಾನಕ್ಕೆ ಸೀಮಿತವಾಗದೆ ನೆರೆದಿರುವ ಎಲ್ಲಾ ಜಾತಿ-ಧರ್ಮಿಯರ ಸೌಹಾರ್ದತೆಯ ಸಂದೇಶ ಎಲ್ಲೆಡೆಗೆ ಎಲ್ಲರಿಗೂ ರವಾನೆ ಆಗಬೇಕು” ಎಂದು ಮಂಗಳೂರು ಧರ್ಮಪ್ರಾಂತ್ಯದ ಕೆಥೋಲಿಕ್ ಕ್ರೈಸ್ತ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಅತಿವಂದನೀಯ ಡಾ ಅಲೋಸಿಯಸ್ ಪಾವುಲ್ ಡಿÉೂೀಜ ಹೇಳಿದರು.

ನಿನ್ನೆ ಅಗ್ರಾರ್ ಚರ್ಚ್ ವಠಾರದಲ್ಲಿ ಬಿಷಪರ ಗುರುದೀಕ್ಷೆ ಸುವರ್ಣ ಮಹೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಅವರು, “ಹುಟ್ಟೂರಿನಲ್ಲಿ ಸಿಗುವ ಗೌರವ ಸನ್ಮಾನ ಅತ್ಯಂತ ಶ್ರೇಷ್ಠವೂ ಅಪ್ಯಾಯಮಾನವು ಆಗಿದೆ. ಇದಕ್ಕೆ ಇಲ್ಲಿ ಸೇರಿದ ಶಿಸ್ತುಬದ್ದ ಜನಸ್ತೋಮ, ಅಚ್ಚುಕಟ್ಟಿನ ವ್ಯವಸ್ಥೆ ಸಾಕ್ಷಿಯಾಗಿದೆ. ಮುನ್ನೂರು ವರ್ಷಗಳಿಗೂ ಮಿಕ್ಕಿದ ಆಧ್ಯಾತ್ಮ ಕರ್ತವ್ಯ ಪೂರೈಸುತ್ತಿರುವ ಅಗ್ರಾರ್ ಚರ್ಚ್ ವ್ಯಾಪ್ತಿ ಈ ಹಿಂದೆ ಬೆಳ್ತಂಗಡಿ ತಾಲೂಕಿಗೂ ವಿಸ್ತರಿಸಿತ್ತು. ಕ್ರೈಸ್ತ ಕ್ಷೇತ್ರಗಳಲ್ಲಿಯೇ ಅತ್ಯಂತ ಪ್ರಾಚೀನತೆ ಹೊಂದಿರುವ ಅಗ್ರಾರ್  ಚರ್ಚ್ ತನ್ನ ವ್ಯಾಪ್ತಿಯಲ್ಲಿ ನಾಲ್ವರು ಬಿಷಪರನ್ನು, ನೂರ ಐವತ್ತಕ್ಕೂ ಮಿಕ್ಕಿ ಧರ್ಮ ಗುರುಗಳನ್ನು, ಮುನ್ನೂರೈವತ್ತಕ್ಕೂ ಮಿಕ್ಕ ಧರ್ಮಭಗಿನಿಯರನ್ನು ಸಮಾಜಕ್ಕೆ ಸಮರ್ಪಿಸಿದ ಕೀರ್ತಿ ಪಡೆದಿದೆ ಎಂದರು.

ಅಭಿನಂದನಾ ಭಾಷಣ ಮಾಡಿದ ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯ ಧರ್ಮಾಧ್ಯಕ್ಷ ಡಾ ಜೆರಾಲ್ಡ್ ಐಸಾಕ್ ಲೋಬೊ, “ದೇವರನ್ನು ಹೊರತುಪಡಿಸಿದರೆ ಗುರುಗಳೇ ಶ್ರೇಷ್ಟರು. ಗುರುವೆಂದರೆ  ದೇವರು ಹಾಗೂ ಜನರ ನಡುವಿನ ಸಂಪರ್ಕದ ಕೊಂಡಿಯಾಗಿದ್ದಾರೆ” ಎಂದರು.

ಬಳ್ಳಾರಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ ಹೆನ್ರಿ ಡಿ’ಸೋಜ ಮಾತನಾಡಿ ಇಲ್ಲಿನ ಧರ್ಮಪ್ರಾಂತ್ಯ ಮತ್ತು ಧರ್ಮಗುರುಗಳು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.

ಕೇಂದ್ರದ ಮಾಜಿ ಸಚಿವ, ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಅರಣ್ಯ ಸಚಿವ ಬಿ ರಮಾನಾಥ ರೈ, ಆಹಾರ ಸಚಿವ ಯು ಟಿ ಖಾದರ್, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜ, ಮಂಗಳೂರು ಶಾಸಕ ಜೆ ಆರ್ ಲೋಬೊ ಶುಭ ಹಾರೈಸಿದರು.

ಬಂಟ್ವಾಳ ಪುರಸಭಾಧ್ಯಕ್ಷ ಪಿ ರಾಮಕೃಷ್ಣ ಆಳ್ವ, ಮಂಗಳೂರು ಎಸ್‍ಆರ್‍ಎ ಪ್ರಾವಿನ್ಸ್‍ಷಿಯಲ್ ಸುಪೀರಿಯರ್ ಭಗಿನಿ ಝಿನಾ, ರಾಜ್ಯ ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷ ಹಾಜಿ ಬಿ ಎಚ್ ಖಾದರ್, ರಾಜ್ಯ ಅಲ್ಪ ಸಂಖ್ಯಾತರ ಅಭಿವೃದ್ದಿ ನಿಗಮದ ಅಧ್ಯಕ್ಷ ಎಂ ಎ ಗಫೂರ್, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರೋಯ್ ಕ್ಯಾಸ್ಟಲಿನೊ, ಬ್ಲೊಸಂ ಆಸ್ಕರ್ ಫೆರ್ನಾಂಡಿಸ್ ಮೊದಲಾದವರು ಭಾಗವಹಿಸಿದ್ದರು.

ಸುವರ್ಣ ಮಹೋತ್ಸವ ಸಂಭ್ರಮ ಸಮಿತಿ ಸಂಚಾಲಕ ಪಿಯೂಸ್ ಎಲ್ ರೋಡ್ರಿಗಸ್ ಸ್ವಾಗತಿಸಿ, ಬಂಟ್ವಾಳ ವಲಯ ಪ್ರಧಾನ ಧರ್ಮಗುರು ಫಾ ಮ್ಯಾಕ್ಸಿಂ ಎಲ್ ನೊರೊನ್ಹಾ ಪ್ರಾಸ್ತವನೆಗೈದರು.