ವ್ಯಾಜ್ಯವಿರುವ ಶಿಮಂತೂರು-ಅಂಗರಗುಡ್ಡೆ ರಸ್ತೆಗೆ ಮಂಗಳೂರು ಏಸಿ ದಿಢೀರ್ ಭೇಟಿ

ತಕರಾರಿನಿಂದ ತಡೆಯಾಗಿರುವ ಶಿಮಂತೂರು-ಅಂಗರಗುಡ್ಡೆ ರಸ್ತೆ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಕೆಲ ತಿಂಗಳಿನಿಂದ ಸ್ಥಳೀಯರೊಬ್ಬರ ಹಾಗೂ ಶಿಮಂತೂರು ದೇವಳದ ಆಡಳಿತ ಸಮಿತಿಯ ನಡುವೆ ತಿಕ್ಕಾಟದಿಂದ ಮುಚ್ಚಲ್ಪಟ್ಟಿರುವ ಶಿಮಂತೂರು-ಅಂಗರಗುಡ್ಡೆ ರಸ್ತೆಗೆ ಮಂಗಳೂರು ಏಸಿ ರೇಣುಕಾ ಪ್ರಸಾದ್ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮಾತನಾಡಿದ ಅವರು, “ಎರಡು ಕಡೆಗೂ ನೋಟಿಸ್ ಮಾಡಿ ಆದಷ್ಟು ಬೇಗ ಸಮಸ್ಯೆ ಬಗೆಹರಿಸಲಾಗುವುದು” ಎಂದರು.

ರಸ್ತೆ ವಿವಾದ ರಾಜಿ ಸಂಧಾನದ ಮೂಲಕ ಬಗೆಹರಿಸುವ ಸಾಧ್ಯತೆ ನಿಚ್ಚಳವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಶಾಸಕ ಅಭಯಚಂದ್ರ ನೇತೃತ್ವದಲ್ಲಿ ಅತಿಕಾರಿಬೆಟ್ಟು ಪಂಚಾಯತಿ ಉಪಾಧ್ಯಕ್ಷ ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು ಹಾಗೂ ಸ್ಥಳೀಯ ಪಂಚಾಯತಿ ಸದಸ್ಯ ಹರೀಶ್ ಶೆಟ್ಟಿ ಕಳೆದ ಕೆಲ ದಿನಗಳಿಂದ ಜಾಗದ ತಕರಾರು ನಡೆಸಿದ ಸೌಭಾಗ್ಯ ರಾಜೇಶ್ ಎಂಬವರನ್ನು ರಾಜಿ ಸಂಧಾನದ ಮೂಲಕ ವಿವಾದವನ್ನು ಇತ್ಯರ್ಥಗೊಳಿಸಲು ಕರೆಸಿದ್ದು ಅವರು ಮೌಖಿಕವಾಗಿ ಷರತ್ತುಬದ್ಧ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.

ಮುಂದಿನ ಒಂದು ವಾರದೊಳಗಡೆ ಪ್ರಕರಣ ರಾಜಿ ಸಂದಾನದ ಮೂಲಕ ಇತ್ಯರ್ಥಗೊಳ್ಳಲಿದ್ದು, ರಸ್ತೆ ತಡೆ ತೆರವುಗೊಳ್ಳಲಿದೆ ಎಂದು ತಿಳಿದುಬಂದಿದೆ.