ದಲಿತರಿಗೆ ಬಾಗಿಲು ತೆರೆದ ಮಂದಿರ

ತಿರುವನ್ನಮಲೈ : ಜಿಲ್ಲೆಯ ವಂಬಾಕ್ಕಂನ ತೂಲುಕನಂಥಮ್ಮನ್ ದೇವಸ್ಥಾನದೊಳಗೆ ಹರಿಹರಪಾಕ್ಕಂ ಗ್ರಾಮದ ಹಿಂದೂಗಳು, ದಲಿತರಿಗೆ ಪ್ರವೇಶ ಅವಕಾಶ ಕಲ್ಪಿಸಲು ಒಪ್ಪಿಗೆ ಸೂಚಿಸಿದ್ದರಿಂದ ಕಳೆದೆರಡು ತಿಂಗಳಿಂದ ಮುಚ್ಚಲಾಗಿದ್ದ ದೇವಸ್ಥಾನದ ಬಾಗಿಲು ಕೊನೆಗೂ ತೆರೆಯಲಾಯಿತು.
ಬ್ಲಾಕ್ ಅಭಿವೃದ್ಧಿ ಅಧಿಕಾರಿ, ತಹಶೀಲ್ದಾರ್ ಮತ್ತು ಪೊಲೀಸ್ ನಿರೀಕ್ಷಕರ ಉಪಸ್ಥಿತಿಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಭೆಯಲ್ಲಿ ಸುಮಾರು 400 ಸವರ್ಣೀಯ ಹಿಂದೂಗಳು ಪಾಲ್ಗೊಂಡಿದ್ದರು. ಸವರ್ಣೀಯರು ದೇವಳಕ್ಕೆ ದಲಿತರಿಗೆ ಪ್ರವೇಶ ಆಕ್ಷೇಪಿಸಿದ್ದರಿಂದ ದೇವಸ್ಥಾನದ ಬಾಗಿಲು ಮುಚ್ಚಿತ್ತು.
ಜಾತಿ, ಧರ್ಮ ಮುಂದಿಟ್ಟುಕೊಂಡು ಯಾರಿಗೂ ದೇವಸ್ಥಾನದೊಳಗೆ ಪ್ರವೇಶ ನಿರಾಕರಿಸಲಾಗದು ಎಂದು ಸಭೆಯಲ್ಲಿ ಗ್ರಾಮಸ್ಥರು ಸಾಮರಸ್ಯದ ಒಪ್ಪಂದ ಮಾಡಿಕೊಂಡರು.
ಪೊಲೀಸ್ ಸಿಬ್ಬಂದಿಯ ಉಪಸ್ಥಿತಿಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ದೇವಸ್ಥಾನದ ಬಾಗಿಲು ತೆರೆದರು. ಕಳೆದ ವರ್ಷ ಜುಲೈ 22ರಂದು ದಲಿತ ಯುವಕರ ಗುಂಪೊಂದು ಚೆಯ್ಯರ್ ಸಬ್-ಕಲೆಕ್ಟರರಿಗೆ ದೂರೊಂದು ನೀಡಿ, ತಮಗೆ ಆಗಸ್ಟಿನಲ್ಲಿ ನಡೆಯುವ ತೂಲುಕನಥಮ್ಮನ್ ದೇವಸ್ಥಾನದ ಉತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಬೇಕೆಂದು ಕೋರಿದ್ದರು. ಬಳಿಕ ಗ್ರಾಮದಲ್ಲಿ ದಲಿತರು ಮತ್ತು ಹಿಂದೂಗಳ ಮಧ್ಯೆ ಸಂಘರ್ಷವೇರ್ಪಟ್ಟಿತ್ತು.
ಅಧಿಕಾರಿಗಳು ನಡೆಸಿದ ಅಂದಿನ ಶಾಂತಿಸಭೆಯಲ್ಲಿ ದಲಿತರ ಪ್ರವೇಶಕ್ಕೆ ಸವರ್ಣೀಯ ಹಿಂದೂಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ 2016 ಅಕ್ಟೋಬರ್ 25ರಂದು ಚೆಯ್ಯರ್ ಸಬ್-ಕಲೆಕ್ಟರ್ ಶತಮಾನದಿಂದ ತಾರತಮ್ಯ ಮುಂದುವರಿದುಕೊಂಡು ಬಂದಿದ್ದ ದೇವಸ್ಥಾನದ ಬಾಗಿಲು ತೆರೆದಿದ್ದರು. ಆಗ ಸುಮಾರು 200 ದಲಿತರು ದೇವಸ್ಥಾನದೊಳಗೆ ಪ್ರವೇಶಿಸಿ ಪ್ರಾರ್ಥನೆ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ವಿವಿಧ ಜಾತಿಗಳ ಮಧ್ಯೆ ಸಂಘರ್ಷ ಭುಗಿಲೆದ್ದಿತ್ತು. ಗ್ರಾಮದಲ್ಲಿ ಗಲಭೆ ನಡೆಯಬಹುದಾದ ಮುನ್ಸೂಚನೆಯರಿತ ಜಿಲ್ಲಾಡಳಿತ ತಕ್ಷಣದಿಂದಲೇ ದೇವಸ್ಥಾನದ ಬಾಗಿಲು ಮುಚ್ಚಿತ್ತು.
ಬಳಿಕ ದೇವಸ್ಥಾನದ ಬಾಗಿಲು ತೆರೆಯುವಂತೆ ಆಗ್ರಹಿಸಿ ಹಿಂದೂಗಳು ಜಿಲ್ಲಾಧಿಕಾರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರು. ಜಿಲ್ಲಾಡಳಿತ ಇದಕ್ಕೆ ನಿರಾಕರಿಸಿತ್ತು. ಇದರಿಂದ ಕುಪಿತಗೊಂಡ ಹಿಂದೂಗಳ ಗುಂಪೊಂದು ಜನವರಿ 8ರಂದು ದೇವಸ್ಥಾನದ ಬಾಗಿಲು ಒಡೆದು ಪೂಜೆ ನಡೆಸಿತ್ತು.
ಘಟನೆಗೆ ಸಂಬಂಧಿಸಿ ಪೊಲೀಸರು ಇಬ್ಬರು ಹಿಂದೂ ಯುವಕರನ್ನು ಬಂಧಿಸಿ, 8 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭವಿಷ್ಯದಲ್ಲಿ ಜೈಲು ಪಾಲಾಗಲಿರುವ ಹಿಂದೂ ಮಕ್ಕಳ ಸಂಖ್ಯೆ ಹೆಚ್ಚಬಹುದೆಂಬ ಭೀತಿಯಿಂದ ಗ್ರಾಮಸ್ಥರು ತಮ್ಮ ಭಿನ್ನಾಭಿಪ್ರಾಯ ಇತಿಶ್ರೀ ಹಾಡಲು ತೀರ್ಮಾನಿಸಿದರು. ಈ ಹಿನ್ನೆಲೆಯಲ್ಲಿ ಸದ್ಯ ವಿವಾದ ಅಂತ್ಯಗೊಂಡು ದಲಿತರಿಗೆ ದೇವಸ್ಥಾನದೊಳಗೆ ಪ್ರವೇಶ ಅವಕಾಶ ಸಿಕ್ಕಿದೆ.