`ಮನೇಜರ್ ನನ್ನ ಹತ್ತಿರ ಫ್ಲರ್ಟ್ ಮಾಡುತ್ತಿದ್ದಾರೆ’

ಪ್ರ : ನಾನು ಈ ಊರಿಗೆ ಹೊಸದಾಗಿ ಬಂದು ಕೆಲಸಕ್ಕೆ ಸೇರಿಕೊಂಡಿದ್ದೇನೆ. ನನ್ನ ವಿದ್ಯೆ, ನನ್ನ ಇಂಟರೆಸ್ಟಿಗೆ ತಕ್ಕುದಾದ ಕೆಲಸ ಇದು ಅಂತ ಭಾವಿಸಿ ಇಲ್ಲಿ ಜಾಯಿನ್ ಆದೆ. ನನ್ನ ಕಲೀಗ್ಸ್ ಎಲ್ಲರೂ ಡೀಸೆಂಟ್ ಇದ್ದಾರೆ. ಅವರಾಯಿತು, ಅವರ ಕೆಲಸವಾಯಿತು ಅನ್ನುವ ಮನೋಭಾವದವರು. ಯಾರೂ ಹೆಚ್ಚು ಪರ್ಸನಲ್ ವಿಷಯ ಮಾತಾಡುವುದಿಲ್ಲ. ಆಫೀಸಿಗೆ ಸಂಬಂಧಿಸಿದ ವಿಷಯ ಮಾತ್ರ ಚರ್ಚಿಸುತ್ತಾರೆ. ನನಗೂ ಅಂತಹ ನೇಚರೇ ಇಷ್ಟ. ಆದರೆ ನಮ್ಮ ಮನೇಜರ್ ಮಾತ್ರ ದಿನಕ್ಕೊಂದು ಬಾರಿಯಾದರೂ ನನ್ನ ಕ್ಯುಬಿಕಲ್ಲಿಗೆ ಬಂದು ಏನಾದರೂ ಹರಟೆ ಹೊಡೆಯುತ್ತಾರೆ. ನಾನು ಎಲ್ಲಿ ವಾಸವಾಗಿದ್ದೇನೆ, ಊಟ-ತಿಂಡಿ ಎಲ್ಲಿ ಮಾಡುತ್ತೀ, ಜೊತೆಯಲ್ಲಿ ಯಾರ್ಯಾರಿದ್ದಾರೆ ಅಂತ ಎಲ್ಲವನ್ನೂ ಕೇಳುತ್ತಾರೆ. ಒಮ್ಮೆ ಸಂಜೆಯ ಹೊತ್ತು ನಮ್ಮ ರೂಮಿಗೂ ಬಂದಿದ್ದರು. ಅವರು ಇದೇ ಕಡೆಯಿಂದ ಪಾಸಾಗುತ್ತಿದ್ದರೆಂದೂ ನನ್ನ ಕೈಯಿಂದ ಒಂದು ಕಪ್ ಟೀ ಕುಡಿದು ಹೋಗೋಣವೆಂದು ನನ್ನ ರೂಮಿಗೆ ಬಂದಿದ್ದಾಗಿಯೂ ಸಬೂಬು ಹೇಳಿದ್ದರು. ನನಗ್ಯಾಕೋ ಅವರದು ಅತಿಯಾಯಿತು ಅನಿಸುತ್ತಿದೆ. ಸಂದರ್ಭ ಸಿಕ್ಕರೆ ಬೆಡ್ಡಿಗೂ ಕರೆಯಬಹುದು ಅನ್ನುವ ಆತಂಕವೂ ಇದೆ. ಅವರಿಗೆ ಮದುವೆಯಾಗಿ ಎರಡು ಮಕ್ಕಳೂ ಇದ್ದಾರಂತೆ. ಆದರೂ ಯಾಕೀ ದುರ್ಬುದ್ಧಿ? ಅವರ್ಯಾಕೆ ನನ್ನ ಜೊತೆ ಈ ರೀತಿ ಫ್ಲರ್ಟ್ ಮಾಡಬೇಕು? ನನಗಿದೆಲ್ಲ ಇಷ್ಟವಾಗುವುದಿಲ್ಲ ಅಂತ ಖಾರವಾಗಿ ಹೇಳಬೇಕೆಂದಿದ್ದೇನೆ. ನಿಮ್ಮ ಅಭಿಪ್ರಾಯವೇನು?

ಉ : ನಿಮ್ಮ ಬರಹದ ಪ್ರಕಾರ ಅವರು ನಿಮ್ಮ ಜೊತೆ ದುರ್ವರ್ತನೆ ತೋರಿದ ಬಗ್ಗೆ ಎಲ್ಲೂ ಪ್ರಸ್ತಾಪವಿಲ್ಲ. ಹೊಸದಾಗಿ ಊರಿಗೆ ಬಂದ ಒಂಟಿಹುಡುಗಿ ಸುರಕ್ಷಿತವಾಗಿ ಇದ್ದಾಳಾ ಅನ್ನುವ ಕನ್ಸರ್ನಿನಿಂದಾಗಿ ಅವರು ನಿಮ್ಮ ಬಗ್ಗೆ ವಿಚಾರಿಸಿಕೊಳ್ಳುತ್ತಿರಬಹುದು. ಅವರು ಮೆನೇಜರೂ ಆಗಿರುವುದರಿಂದ ಎಲ್ಲರ ಯೋಗಕ್ಷೇಮ ವಿಚಾರಿಸಿಕೊಳ್ಳುವುದು ತನ್ನ ಕರ್ತವ್ಯ ಅಂತ ತಿಳಿದಿರಬಹುದು. ಅದನ್ನೇ ನೀವು ತಪ್ಪಾಗಿ ಭಾವಿಸುವುದು ಸರಿಯಲ್ಲ. ಅವರು ಬೇಕೆಂದೇ ನಿಮ್ಮ ರೂಮಿಗೆ ಬಂದಿದ್ದಾರೆ ಅನ್ನುವ ಪ್ರೂಫೂ ನಿಮ್ಮಲ್ಲಿಲ್ಲ. ಅವರ ಮಾತಿನಂತೆ ಅದೇ ದಾರಿಯಲ್ಲಿ ಹೋಗುತ್ತಿರುವಾಗ ನಿಮ್ಮನ್ನು ಮಾತಾಡಿಸಿಕೊಂಡು ಹೋಗೋಣವೆನ್ನುವ ಇರಾದೆಯಿಂದಲೇ ನಿಮ್ಮ ರೂಮಿಗೆ ಬಂದಿರಬಹುದು. ಅಷ್ಟಕ್ಕೇ ಅವರು ನಿಮ್ಮನ್ನು ಬೆಡ್ಡಿಗೆ ಕರೆಯಬಹುದು ಅಂತ ಯೋಚಿಸುವುದು ಸ್ವಲ್ಪ ಅತಿಯಾಯಿತು. ಹಾಗಂತ ನೀವು ಬೆಳ್ಳಗಿರುವುದೆಲ್ಲ ಹಾಲು ಅಂತ ತಿಳಿದುಕೊಳ್ಳಬೇಕು ಅಂತಲೂ ನಾನು ಹೇಳುತ್ತಿಲ್ಲ. ನಿಮ್ಮ ಹುಶಾರಿಯಲ್ಲಿ ನೀವಿರಲೇಬೇಕು. ಅವರ ನೋಟದಲ್ಲಿ ನಿಮಗೆ ಕಾಮುಕತನ ಕಾಣುತ್ತದಾ? ಅವರು ನಿಮ್ಮನ್ನು ವೃತಾ ಸ್ಪರ್ಷಿಸಲು ಹಾತೊರೆಯುತ್ತಾರಾ? ನೀವು ಒಂಟಿಯಾಗಿ ಸಗಲು ಕಾಯುತ್ತಿರುತ್ತಾರಾ? ಹಾಗೆಲ್ಲ ಇದ್ದರೆ ನೀವು ಖಡಕ್ಕಾಗಿರುವುದೇ ಉತ್ತಮ.