ಬಡ, ರೋಗಿ ಮಕ್ಕಳಿಗಾಗಿ ವೇಷ ಹಾಕುವ ರವಿ ಕಟಪಾಡಿ

ನಮ್ಮ ಪ್ರತಿನಿಧಿ ವರದಿ

ಉಡುಪಿ : ದೇವಸ್ಥಾನ ನಗರಿ ಉಡುಪಿ ಜಿಲ್ಲೆಯು ಬುಧವಾರ ಮತ್ತು ಗುರುವಾರ ಕೃಷ್ಣಾಷ್ಟಮಿ ಮತ್ತು ವಿಠಲ ಪಿಂಡಿ ಆಚರಣೆಗಾಗಿ ಭರದ ಸಿದ್ಧತೆಯಲ್ಲಿದೆ. ಕೃಷ್ಣ ಮಠ ಮತ್ತು ರಸ್ತೆಗಳು ಝಗಮಗಿಸುವ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ದೇವಸ್ಥಾನದ ವಿವಿಧ ಭಾಗಗಳಲ್ಲಿ ಪುಟಾಣಿ ಕೃಷ್ಣರ ನೃತ್ಯಕ್ಕಾಗಿ ವೇದಿಕೆಗಳು ಸಿದ್ಧಗೊಂಡಿವೆ.

ಈ ನಡುವೆ ಕೆಲವು ಮಂದಿ ದೇವರ ಹರಕೆಗಾಗಿ ಬಣ್ಣ ಹಚ್ಚಿ ಹರಕೆ ಸಂದಾಯ ಮಾಡುತ್ತಾರೆ. ಇದಕ್ಕಿಂತ ಒಂದು ಹೆಜ್ಜೆ ಮುಂದೆ ಇಟ್ಟಿರುವ ರವಿ ಕಟಪಾಡಿ, ಬಡ, ರೋಗಿ ಮಕ್ಕಳಿಗಾಗಿ ಕಳೆದ ಮೂರು ವರ್ಷಗಳಿಂದ ಬಣ್ಣ ಹಾಕಿ ಮನೋರಂಜನೆ ನೀಡುತ್ತಿದ್ದಾರೆ. ದೇವಸ್ಥಾನಕ್ಕೆ ಬರುವ ಭಕ್ತರು ಇವರ ವೇಷಕ್ಕೆ ಗೌರವವಾಗಿ ನೀಡುವ ಹಣವನ್ನು ಸಂಗ್ರಹಿಸಿ ಅವರು ದಾನವಾಗಿ ನೀಡುತ್ತಿದ್ದಾರೆ. ಈ ವರ್ಷ ರವಿ ಕಟಪಾಡಿ ನಾಲ್ಕು ರೋಗಿ ಮಕ್ಕಳಿಗೆ ಧನ ಸಹಾಯ ಮಾಡುವುದಾಗಿ ಮಾತು ಕೊಟ್ಟಿದ್ದಾರೆ. ಮೊದಲ ವರ್ಷ ಅವರು ರೂ 1 ಲಕ್ಷ ಸಂಗ್ರಹಿಸಿದ್ದಾರೆ. ಎರಡನೇ ವರ್ಷ ರೂ 3.20 ಲಕ್ಷ ಸಂಗ್ರಹಿಸಿದ್ದಾರೆ ಮತ್ತು ಮೂರನೇ ವರ್ಷ ಅವರು ರೂ 4.65 ಲಕ್ಷ ಸಂಗ್ರಹಿಸಿದ್ದಾರೆ. ಇದುವರೆಗೆ ಅವರು ಸುಮಾರು 9 ಮಕ್ಕಳಿಗೆ ಸಹಾಯ ಮಾಡಿದ್ದಾರೆ. ಈ ಬಾರಿ ರವಿ, ಯುರೋಪಿನ ಜಾನಪದ ಪಾತ್ರ ಕ್ರಾಂಪಸ್ ವೇಷ ಹಾಕಲಿದ್ದಾರೆ. ಈ ವೇಷದ ವೇಷಭೂಷಣ ವೆಚ್ಚ ರೂ 35,000.

ಈ ಬಾರಿ ರವಿ ಚರ್ಮ ರೋಗದಿಂದ ಬಳಲುತ್ತಿರುವ ಒಂದೂವರೆ ವರ್ಷದ ಲಾವಣ್ಯ, ಕ್ಯಾನ್ಸರ್ ರೋಗಿ ಶಿವಮೊಗ್ಗದ ಮೆಹಕ್, ಇನ್ನೊಬ್ಬ ಕ್ಯಾನ್ಸರ್ ರೋಗಿ ಒಂದೂವರೆ ವರ್ಷದ ಮಗು ದೆಂಡೂರುಕಟ್ಟೆ ಮತ್ತು ಕೊನೆಯದಾಗಿ ಬನ್ನಂಜೆಯ ಒಂದು ಮಗುವಿಗೆ ಸಹಾಯ ಮಾಡಲು ನಿರ್ಧರಿಸಿದ್ದಾರೆ. ಸಂಗ್ರಹಿಸಿದ ಹಣವನ್ನು ಸೆಪ್ಟೆಂಬರ್ 19ರಂದು ಸಂಜೆ 4 ಗಂಟೆಗೆ ಕಟಪಾಡಿಯ ವಿಜಯಾ ಬ್ಯಾಂಕ್ ಎದುರು ಫಲಾನುಭವಿಗಳಿಗೆ ನೀಡಲಿದ್ದಾರೆ.

ರವಿ ಕಟಪಾಡಿಯಂತೆ ಬಡವರಿಗಾಗಿ ಪ್ರತಿ ವರ್ಷ ವೇಷ ತೊಡುವ ಇನ್ನೊಬ್ಬ ವ್ಯಕ್ತಿಯೆಂದರೆ ರಾಮಾಂಜಿ. ಹೊಸ ಉಪಾಯಗಳೊಂದಿಗೆ ಪ್ರತಿ ವರ್ಷ ಕಾಣಿಸುತ್ತಾರೆ. ಮಕ್ಕಳಿಗಾಗಿ ಸ್ವಯಂ ಕೆಲಸ ನಿರ್ವಹಿಸುವ ಸಂಘಟನೆ ನಮ್ಮ ಭೂಮಿ ಆಶ್ರಯದಲ್ಲಿ ಬೆಳೆದವರು. ಅವರು ಕಳ್ವಾರಿ ವೃದ್ದಾಶ್ರಮದ ಹಿರಿಯ ನಾಗರಿಕರಿಗೆ ಸಹಾಯ ಮಾಡಲು ವೇಷ ಹಾಕುತ್ತಿದ್ದಾರೆ. ಕಳೆದ ಬಾರಿ ಅವರು ರೂ 1 ಲಕ್ಷ ಸಂಗ್ರಹಿಸಿದ್ದಾರೆ.