ಪತ್ನಿ, ಪುತ್ರನ ಬಿಟ್ಟು ಕಾಣೆಯಾಗಿದ್ದ ವ್ಯಕ್ತಿ 8 ವರ್ಷ ಬಳಿಕ ಪತ್ತೆ

ನಮ್ಮ ಪ್ರತಿನಿಧಿ ವರದಿ

ವಿಟ್ಲ : ಪತ್ನಿ ಮತ್ತು ಪುತ್ರನನ್ನು ತವರು ಮನೆಯಲ್ಲಿ ಬಿಟ್ಟು ಎಂಟು ವರ್ಷದ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯನ್ನು ವಿಟ್ಲ ಪೊಲೀಸರು ಉಡುಪಿ ಸಮೀಪ ಪತ್ತೆಹಚ್ಚಿದ್ದಾರೆ.

ಉಡುಪಿ ಸಮೀಪದ ಕಟಪಾಡಿ ನಿವಾಸಿ ಗಣೇಶ ಶೇರಿಗಾರ (38) ಎಂಬಾತ ವಿಟ್ಲ ಠಾಣಾ ವ್ಯಾಪ್ತಿಯ ಮೂಡಂಬೈಲು ನಿವಾಸಿ ಶಶಿಕಲಾ ರೈ(35)ಯನ್ನು 10 ವರ್ಷದ ಹಿಂದೆ ಕಾನೂನು ರೀತಿಯಲ್ಲಿ ವಿವಾಹವಾಗಿದ್ದ. ಆರಂಭದಲ್ಲಿ ಗಣೇಶ್ ಪತ್ನಿಯನ್ನು ಚೆನ್ನಾಗಿ ನೋಡಿಕೊಂಡಿದ್ದ. ಈ ಮಧ್ಯೆ ಶಶಿಕಲಾ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆದರೆ ಕೆಲವೇ ತಿಂಗಳಲ್ಲಿ ಪತ್ನಿ ಮತ್ತು ಎಳೆಯ ಮಗುವನ್ನು ಆಕೆಯ ತವರು ಮನೆಯಲ್ಲಿ ಬಿಟ್ಟ ಪತಿ ಗಣೇಶ್ ಬಳಿಕ ನಾಪತ್ತೆಯಾಗಿದ್ದು, ಈ ಬಗ್ಗೆ ಪತ್ನಿ ವಿಟ್ಲ ಠಾಣೆಗೆ ದೂರು ನೀಡಿದ್ದಳು.

ಎಂಟು ವರ್ಷಗಳಿಂದ ಪತಿಯ ಬಗ್ಗೆ ಸಾಕಷ್ಟು ಹುಡುಕಾಡುತ್ತಿದ್ದ ಶಶಿಕಲಾ ತನಗೆ ದೊರೆತ ಮಾಹಿತಿಯನ್ನು ವಿಟ್ಲ ಪೊಲೀಸರಿಗೂ ನೀಡುತ್ತಿದ್ದಳು. ಎಷ್ಟೇ ಹುಡುಕಾಡಿದರೂ ಯಾವುದೇ ಸುಳಿವು ಈವರೆಗೂ ಸಿಕ್ಕಿಲ್ಲದ ಕಾರಣ ಗಣೇಶನ ನಾಪತ್ತೆ ಪ್ರಕರಣ ಪೊಲೀಸ್ ಇಲಾಖೆಗೆ ದೊಡ್ಡ ಸವಾಲಾಗಿತ್ತು. ಆದರೆ ಇದೀಗ ವಿಟ್ಲ ಪೊಲೀಸರು ಉಡುಪಿ ಸಮೀಪದ ಕಟಪಾಡಿಯಲ್ಲಿ ಗಣೇಶನನ್ನು ಪತ್ತೆಮಾಡಿ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.