ಗ್ಯಾಸ್ ಸೋರಿಕೆಯಿಂದ ಸುಟ್ಟು ಗಾಯಗೊಂಡ ವ್ಯಕ್ತಿ ಸಾವು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ವಿಟ್ಲ : ಗ್ಯಾಸ್ ಸೋರಿಕೆಯಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಕರೋಪಾಡಿ ಗ್ರಾಮದ ಮೂವರ ಪೈಕಿ ಒಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಇಲ್ಲಿನ ಕುಡ್ಪಲ್ತಡ್ಕ ಕಲಾಯಿಗುತ್ತು ನಿವಾಸಿ ರಾಮಯ್ಯ ಶೆಟ್ಟಿ (70) ಮೃತ ವ್ಯಕ್ತಿಯಾಗಿದ್ದು, ಪತ್ನಿ ಜಯಂತಿ ಮತ್ತು ಸ್ಥಳೀಯ ಆಟೋ ಚಾಲಕ ರಮೇಶ್ ಚೇತರಿಸಿಕೊಂಡಿದ್ದಾರೆ. ಕಳೆದ ತಿಂಗಳ 25ರಂದು ರಾಮಯ್ಯ ಶೆಟ್ಟಿಯವರ ಮನೆಯಲ್ಲಿ ಅಡುಗೆ ಅನಿಲ ಖಾಲಿಯಾಗಿದ್ದ ಕಾರಣ ರಮೇಶ್ ಅವರು ಬದಲಿ ಸಿಲಿಂಡರ್ ತಂದು ಜೋಡಿಸುವ ಕೆಲಸಕ್ಕೆ ಮುಂದಾಗಿದ್ದರು. ಆ ಸಂದರ್ಭ ಉಂಟಾದ ಬೆಂಕಿ ಆಕಸ್ಮಿಕದಲ್ಲಿ ರಾಮಯ್ಯ ಶೆಟ್ಟಿ, ಪತ್ನಿ ಜಯಂತಿ ಮತ್ತು ರಮೇಶ್ ಗಾಯಗೊಂಡು ದೇರಳಕಟ್ಟೆ ಆಸ್ಪತ್ರೆಗೆ ದಾಖಲಾಗಿದ್ದರು. ಗಂಭೀರ ಸ್ವರೂಪದ ಗಾಯಗಳಾಗಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮೂವರನ್ನೂ ಕಂಕನಾಡಿ ಆಸ್ಪತ್ರೆಗೆ ದಾಖಲಿಸಿದ್ದರೂ ಗಾಯಾಳುಗಳ ಪೈಕಿ ರಾಮಯ್ಯ ಶೆಟ್ಟಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.