ಮೇಲ್ಕಾರಿನಲ್ಲಿ ಚೂರಿ ಇರಿತ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಕಲ್ಲಡ್ಕದಲ್ಲಿ ಮಂಗಳವಾರ ಸಂಜೆ ಉಭಯ ಕೋಮಿನ ಮಧ್ಯೆ ನಡೆದ ಬೀದಿ ಕಾಳಗ, ಘರ್ಷಣೆಯ ಬಳಿಕ ಲಾಠಿ ಚಾರ್ಜ್ ನಡೆಸಿ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿ ವ್ಯಾಪಕ ಬಂದೋಬಸ್ತ್ ಕೈಗೊಂಡಿರುವ ಮಧ್ಯೆಯೂ ಪಾಣೆಮಂಗಳೂರು ಸಮೀಪದ ಮೆಲ್ಕಾರಿನಲ್ಲಿ ಮಧ್ಯ ರಾತ್ರಿ ವೇಳೆಗೆ ಚೂರಿ ಇರಿತದ ಘಟನೆ ಮರುಕಳಿಸಿದೆ.

ಬೈಕಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಯುವಕನೋರ್ವನ ಮೇಲೆ ಚೂರಿಯಿಂದ ಇರಿದು ಪರಾರಿಯಾದ ಘಟನೆ ಮಂಗಳವಾರ ತಡ ರಾತ್ರಿ 11 ಗಂಟೆ ಬಳಿಕ ನಡೆದಿದೆ. ಬಂಟ್ವಾಳ ಪುರಸಭಾ ಮಾಜಿ ಸದಸ್ಯ, ಇಲ್ಲಿನ ಪೆಟ್ರೋಲ್ ಬಂಕ್ ಮಾಲಕ ದಾಮೋದರ ಎಂಬವರ ಪುತ್ರ ಪವನ್ ಕುಮಾರ್ ಯಾನೆ ಅಣ್ಣು (26) ಎಂಬಾತನೇ ಚೂರಿ ಇರಿತಕ್ಕೊಳಗಾದ ಯುವಕ. ಮೆಲ್ಕಾರ್ ಎಂ ಎಚ್ ಮಿಲ್ ಮುಂಭಾಗದಲ್ಲಿ ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿ ಸ್ನೇಹಿತ  ಕಿಶೋರ್ ಎಂಬಾತನೊಂದಿಗೆ ಮಾತನಾಡುತ್ತಿದ್ದ ವೇಳೆ ದುಷ್ಕರ್ಮಿಗಳು ಇರಿದು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಘಟನೆಯಿಂದ ಗಂಭೀರ ಗಾಯಗೊಂಡು ರಸ್ತೆಗೆ ಬಿದ್ದಿದ್ದ ಪವನನನ್ನು ತಕ್ಷಣ ತುಂಬೆ ಖಾಸಗಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.  ಇದು ಕಲ್ಲಡ್ಕ ಘಟನೆಯ ಮುಂದುವರಿದ ಭಾಗವೋ ಅಥವಾ ಇನ್ಯಾವ ಕಾರಣಕ್ಕಾಗಿ ನಡೆದಿದೆಯೋ ಎಂಬುದು ತಿಳಿದು ಬಂದಿಲ್ಲ.