ರಸ್ತೆಬದಿ ನಿಂತಿದ್ದ ವ್ಯಕ್ತಿ ಮೇಲೆ ಮೇಲೆ ಬಸ್ ಹರಿದು ಮೃತ್ಯು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ವ್ಯಕ್ತಿಯೊಬ್ಬರು ಬಸ್ಸಿನಿಂದ ಇಳಿದು ರಸ್ತೆಯಲ್ಲಿ ನಿಂತಿದ್ದ ವೇಳೆ ಬಸ್ಸು ಚಾಲಕನು ಒಮ್ಮೇಲೇ  ಬಸ್ಸನ್ನು ರಾಂಗ್ ಸೈಡಿನಿಂದ ಚಲಾಯಿಸಿದ ಪರಿಣಾಮ ಬಸ್ಸಿನ ಚಕ್ರವು ವ್ಯಕ್ತಿಯ ತಲೆ ಮೇಲೆ ಹಾಯ್ದು ಆತ ಸಾವನ್ನಪ್ಪಿದ ಘಟನೆ ಬಾರ್ಕೂರು ಸಮೀಪದ ಹೇರಾಡಿ ಗ್ರಾಮದ ರಂಗನಕೆರೆ ಕೊನೆಯ ಬಸ್ ನಿಲ್ದಾಣದಲ್ಲಿ ಶನಿವಾರ ಸಂಜೆ ಸಂಭವಿಸಿದೆ. ನರಸಿಂಹ (55) ಎಂಬವರು ಸಾವನ್ನಪ್ಪಿದ ದುರ್ದೈವಿ.   ನರಸಿಂಹನು ಗೋಳಿಯಂಗಡಿ ಕಡೆಗೆ ಹೋಗುವ ದುರ್ಗಾದೇವಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದು, ಹೇರಾಡಿ ಗ್ರಾಮದ ರಂಗನಕೆರೆ ಕೊನೆ ಬಸ್ಸು ನಿಲ್ದಾಣದಲ್ಲಿ ಬಸ್ಸಿನಿಂದ ಇಳಿದು ರಸ್ತೆಯಲ್ಲಿ ನಿಂತಿದ್ದರು.

ಆ ವೇಳೆ ಆರೋಪಿ ಬಸ್ಸು ಚಾಲಕ ನಾಗರಾಜ ಶೆಟ್ಟಿ ಎಂಬಾತ ಬಸ್ಸನ್ನು ಒಮ್ಮಲೇ ವೇಗವಾಗಿ ಎಡಭಾಗದಿಂದ ಚಲಾಯಿಸಿದ್ದಾನೆ. ಪರಿಣಾಮ ರಸ್ತೆಯಲ್ಲಿ ನಿಂತಿದ್ದ ನರಸಿಂಹಗೆ ಬಸ್ಸಿನ ಎಡ ಭಾಗದ ಬಾಡಿ ಡಿಕ್ಕಿ ಹೊಡೆದು ಅವರು ಬಸ್ಸಿನ ಕಡೆಗೆ ರಸ್ತೆಗೆ ಬಿದ್ದಿದ್ದಾರೆ. ಆ ಸಮಯ ಬಸ್ಸಿನ ಎಡ ಭಾಗದ ಹಿಂದಿನ ಚಕ್ರ ನರಸಿಂಹರ ತಲೆ ಮೇಲೆ ಚಲಿಸಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ದೂರಲಾಗಿದೆ. ಅಪಘಾತಕ್ಕೆ ಕಾರಣನಾದ ಆರೋಪಿ ಬಸ್ ಚಾಲಕ ನಾಗರಾಜ ಶೆಟ್ಟಿ ವಿರುದ್ಧ ಬ್ರಹ್ಮಾವರ ಠಾಣೆಯಲ್ಲಿ ಕೇಸು ದಾಖಲಾಗಿದೆ.