ಬಸ್ ಮೈಮೇಲೆ ಹಾಯ್ದು ವ್ಯಕ್ತಿ ಸ್ಥಳದಲ್ಲೇ ಸಾವು

ಸಾಂದರ್ಭಿಕ ಚಿತ್ರ

 

 ನಮ್ಮ ಪ್ರತಿನಿಧಿ ವರದಿ

ಯಲ್ಲಾಪುರ : ಪಟ್ಟಣದ ಶಾಸಕರ ಕಚೇರಿ ಎದುರಿನ ಬೆಲ್ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಬೈಕಿನಿಂದ ಬಿದ್ದ ತಕ್ಷಣ ಬಸ್ ಆತನ ಮೇಲೆ ಹತ್ತಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ವಿಶ್ವನಾಥ (ದಯಾನಂದ) ಶ್ರೀಪಾದ ಶಾನಭಾಗ (60) ಮೃತಪಟ್ಟವರು. ಅವರು ಬೈಕಿನಲ್ಲಿ ಓವರ್ಟೇಕ್ ಮಾಡಿ ಸಾಗುವಾಗ ರಸ್ತೆ ಪಕ್ಕ ತೆಗೆದು ಹಾಕಿದ್ದ ಮಣ್ಣಿನ ರಾಶಿಯ ಮೇಲೆ ಬೈಕ್ ಸ್ಕಿಡ್ ಆಗಿ ರಸ್ತೆ ಮೇಲೆ ಬಿದ್ದಿದ್ದು, ಸಾರಿಗೆ ಸಂಸ್ಥೆಯ ಬಸ್ ಮೈಮೇಲೆ ಹಾಯ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಲ್ ರಸ್ತೆಯುದ್ದಕ್ಕೂ ಬೇಸಿಗೆಯಲ್ಲೇ ರಸ್ತೆ ಪಕ್ಕಕ್ಕೆ ಯಾವುದೋ ಕಾಮಗಾರಿ ನೆಪದಲ್ಲಿ ಮಣ್ಣು ತೆಗೆದು ರಸ್ತೆಗೆ ಬರುವಂತೆ ಹಾಕಿದ್ದು ಮಳೆಗಾಲ ಬಂದರೂ ತೆಗೆಯುವ ಗೋಜಿಗೆ ಹೋಗಿಲ್ಲ. ಈ ಅಸಮರ್ಪಕ ಕಾಮಗಾರಿ ಅವರ ಸಾವಿಗೆ ಕಾರಣವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಸ್ಕೂಟರಿಗೆ ಕಾರು ಡಿಕ್ಕಿ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಮುಲ್ಕಿಯ ಕಾರ್ನಾಡಿನ ಗಾಂಧಿ ಮೈದಾನದ ಎದುರುಗಡೆ ಮುಲ್ಕಿ-ಮೂಡುಬಿದಿರೆ ರಾಜ್ಯ ಹೆದ್ದಾರಿಯಲ್ಲಿ ಸೋಮವಾರ ಬೆಳಿಗ್ಗೆ ಕಿನ್ನಿಗೋಳಿ ಕಡೆಯಿಂದ ವೇಗವಾಗಿ ಬರುತ್ತಿದ್ದ ಕಾರೊಂದು ರಸ್ತೆಯ ಬಲ ಬದಿಯ ನಗರ ಪಂಚಾಯತ್ ಕಡೆಗೆ ತಿರುಗುತ್ತಿದ್ದ ಸ್ಕೂಟರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಿಂದ ಸ್ಕೂಟರ್ ಸಮೇತ ಸವಾರ ರಸ್ತೆಗೆ ಬಿದ್ದಿದ್ದು, ಹೆಚ್ಚಿನ ಅನಾಹುತವಾಗಿಲ್ಲ. ಸ್ಕೂಟರ್ ಹಿಂಬದಿಗೆ ಹಾಗೂ ಕಾರಿನ ಮುಂಭಾಗಕ್ಕೆ ಸ್ವಲ್ಪ ಹಾನಿಯಾಗಿದೆ. ಅಪಘಾತದಿಂದ ಕೆಲ ಹೊತ್ತು ಸಂಚಾರ ವ್ಯತ್ಯಯವಾಗಿತ್ತು.