ವಾಕಿಂಗ್ ಹೋಗಿದ್ದವ ಆನೆ ದಾಳಿಗೆ ಬಲಿ

ವಿರಾಜಪೇಟೆ : ವಾಕಿಂಗ್ ಹೋಗಿದ್ದ ಕರಿನೆರೆವಂಡ ರವಿ ಕಾಳಯ್ಯ (64) ಎಂಬ ಕಾಫಿ ಬೆಳೆಗಾರನೊಬ್ಬನ ಮೇಲೆ ದಾಳಿ ಮಾಡಿದ ಆನೆಯೊಂದು ಆತನನ್ನು ಅಟ್ಟಾಡಿಸಿ, ಎತ್ತಿ ಬಿಸಾಡಿ ಸಾಯಿಸಿದ ಘಟನೆ ವಿರಾಜಪೇಟೆಯ ಪಾಲಂಗಾಲದಲ್ಲಿ ನಡೆದಿದೆ.

ಗಂಟೆ 8 ಆದರೂ ಬಾರದಿರುವುದನ್ನು ಕಂಡ ಮನೆ ಮಂದಿ ಆತಂಕಗೊಂಡು ಹುಡುಕಾಡಲು ಶುರು ಮಾಡಿದಾಗ ಇವರ ಶವ ತೋಟದ ಮಧ್ಯೆ  ಕಂಡು ಬಂದಿದೆ. ತೋಟಕ್ಕೆ ದಾಳಿ ಇಟ್ಟ ಆನೆ ಕುರುಹು ಕೂಡಾ ಕಂಡು ಬಂದಿದ್ದು, ಆನೆ ದಾಳಿಯಿಂದಲೇ  ಸಾವನ್ನಪ್ಪಿದ್ದಾರೆನ್ನುವುದು ಖಚಿತವಾಗಿದೆ.

ಸುದ್ದಿ ಹರಡುತ್ತಿದ್ದಂತೆ ಸ್ಥಳೀಯರು ಭಾರೀ ಸಂಖ್ಯೆಯಲ್ಲಿ ನೆರೆದು, ಇದಕ್ಕೆ ಕಾರಣರಾದ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ ಜಿಲ್ಲಾಧಿಕಾರಿ ಘಟನಾ ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದರು.

ಅರಣ್ಯಾಧಿಕಾರಿ ಮನೋಜ್ ಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ತಿಂಗಳ ಹಿಂದೆಯಷ್ಟೇ ಉದಯ್ ಉತ್ತಪ್ಪ ಎನ್ನುವವರನ್ನು ಆನೆ ದಾಳಿ ಮಾಡಿ ಕೊಂದು ಹಾಕಿದ ಬಳಿಕವೂ ಅರಣ್ಯಾಧಿಕಾರಿಗಳು ಯಾವುದೇ ರೀತಿಯ ಮುನ್ನೆಚ್ಚರಿಕೆ ವಹಿಸದÀ ಕಾರಣ ಇಂತಹ ಘಟನೆ ಮರುಕಳಿಸಲು ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.