ವಿವಾಹಿತೆಗೆ ಕಿರುಕುಳ ನೀಡಿದ ತಪ್ಪಿಗೆ `ಸ್ಟಾಪ್ ಈವ್ ಟೀಸಿಂಗ್’ ಪೋಸ್ಟರ್ ಹಿಡಿದು ನಿಲ್ಲುವ ಶಿಕ್ಷೆ ಈತನಿಗೆ

 ಹೈದರಾಬಾದ್ : ಮಹಿಳೆಯರಿಗೆ ಕಿರುಕುಳ ನೀಡದಂತೆ ಜನರಿಗೆ ಕರೆ ನೀಡುವ ಪೋಸ್ಟರ್ ಒಂದನ್ನು ಕೈಯ್ಯಲ್ಲಿ ಹಿಡಿದುಕೊಂಡು ವ್ಯಕ್ತಿಯೊಬ್ಬ ಇಲ್ಲಿನ ಗನ್ ಪಾರ್ಕ್ ಜಂಕ್ಷನ್ನಿನಲ್ಲಿ ಮಂಗಳವಾರ ದಿನವಿಡೀ ನಿಂತಿದ್ದ. `ಎಂಡ್ ಇಟ್ ನೌ… ಸ್ಟಾಪ್ ಈವ್ ಟೀಸಿಂಗ್’ ಎಂದು ಆತನ ಕೈಯ್ಯಲ್ಲಿದ್ದ ಪೋಸ್ಟರಿನಲ್ಲಿ ಇಂಗ್ಲಿಷ್ ಮತ್ತು ಉರ್ದು ಭಾಷೆಗಳಲ್ಲಿ ಬರೆಯಲಾಗಿತ್ತು. ಈ ವ್ಯಕ್ತಿ ಒಂದು ಉತ್ತಮ ಕಾರ್ಯ ನಡೆಸುತ್ತಿದ್ದಾನೆಂದು ಯಾರಾದರೂ ಅಂದುಕೊಳ್ಳಬಹುದು. ಆದರೆ ಆತ ಹೀಗೆ ನಿಂತಿರುವುದು ನ್ಯಾಯಾಲಯದ ಆದೇಶದ ಹಿನ್ನೆಲೆಯೊಂದರಲ್ಲಿ – ಕಾರಣ ಆತ ವಿವಾಹಿತ ಮಹಿಳೆಯೊಬ್ಬಳನ್ನು ಬೆಂಬಿಡದೆ ಕಾಡಿದ ಪ್ರಕರಣದಲ್ಲಿ ತಪ್ಪಿತಸ್ಥ.

ಮೊಹಮ್ಮದ್ ರಹೀಂ (39) ಎಂಬ ಈ ವ್ಯಕ್ತಿ ವಿವಾಹಿತ ಮಹಿಳೆಯೊಬ್ಬಳಿಗೆ ಆಕೆಯ ಪತಿ ಮನೆಯಲ್ಲಿಲ್ಲದ ವೇಳೆ ನಿರಂತರವಾಗಿ ಕರೆ ಮಾಡಿ ಹಿಂಸಿಸುತ್ತಿದ್ದ. ಆಕೆ ತನ್ನ ಸಿಮ್ ಕಾರ್ಡನ್ನು ಹಲವು ಬಾರಿ ಬದಲಾಯಿಸಿದರೂ  ಪ್ರಯೋಜನವಾಗಿರಲಿಲ್ಲ. ಪ್ರತಿ ಬಾರಿ ಆಕೆಯ ಹೊಸ ನಂಬರನ್ನು ಹೇಗೋ ಪಡೆದುಕೊಂಡು ಆಕೆಗೆ ಕರೆ ಮಾಡುತ್ತಿದ್ದ. ಕೊನೆಗೆ ಆತನ ಕಿರುಕುಳದಿಂದ ಬೇಸತ್ತು ಮಹಿಳೆ ಮೊಬೈಲ್ ಫೋನ್ ಬಳಸುವುದನ್ನೇ ನಿಲ್ಲಿಸಿದರೂ ಆತ  ಆಕೆಯ ಪತಿಗೆ ಕರೆ ಮಾಡಿ ಫೋನ್ ಪತ್ನಿಗೆ ನೀಡುವಂತೆ ಹೇಳುತ್ತಿದ್ದ. ಇದರಿಂದ ಅವರ ವೈವಾಹಿಕ ಸಂಬಂಧದಲ್ಲೂ ಬಿರುಕು ಕಾಣಿಸಿಕೊಂಡು ದಂಪತಿ ಕೌನ್ಸೆಲರ್ ಒಬ್ಬರ ಬಳಿಯೂ ಹೋಗಬೇಕಾಗಿ ಬಂದಿತ್ತು.

ಅಂತಿಮವಾಗಿ ಮಹಿಳೆಯು ಕಿರುಕುಳ ಪ್ರಕರಣಗಳ ತಡೆಗೆಂದೇ ಸ್ಥಾಪಿತವಾಗಿರುವ ತೆಲಂಗಾಣ ಪೊಲೀಸರ `ಶಿ ಟೀಮ್ಸ್’ ಸಂಪರ್ಕಿಸಿದ ನಂತರ ರಹೀಂನನ್ನು ಬಂಧಿಸಲಾಗಿತ್ತು.

ಇಲ್ಲಿನ ಸ್ಪೆಶಲ್ ಮೆಟ್ರೋಪಾಲಿಟನ್ ಮ್ಯಾಜಿಸ್ಟೇಟ್ ನ್ಯಾಯಾಲಯ ಸೋಮವಾರ ಈ ಪ್ರಕರಣದ ತೀರ್ಪು ನೀಡಿದ್ದು ರಹೀಂ ತಪ್ಪಿತಸ್ಥನೆಂದು ಘೋಷಿಸಿತಲ್ಲದೆ ಶಿಕ್ಷೆಯ ಭಾಗವಾಗಿ ಒಂದು ದಿನವಿಡೀ  ಜನರಲ್ಲಿ ಜಾಗೃತಿಯುಂಟು ಮಾಡುವ ಪೋಸ್ಟರ್ ಕೈಯ್ಯಲ್ಲಿ ಹಿಡಿದುಕೊಂಡು  ನಗರದ ಜನನಿಬಿಡ ಪ್ರದೇಶದಲ್ಲಿ ನಿಲ್ಲುವಂತೆ ಆತನಿಗೆ ಆದೇಶಿಸಿತ್ತು.

ಶಿ ಟೀಮ್ಸ್ ಇಲ್ಲಿಯ ತನಕ ಮಹಿಳೆಯರಿಗೆ ಕಿರುಕುಳ ನೀಡಿದ್ದ 848 ಪುರುಷರನ್ನು ಬಂಧಿಸಿದೆ. ಈ ಪ್ರಕರಣಗಳಲ್ಲಿ 236 ಪ್ರಕರಣಗಳಲ್ಲಿ ಸಂತ್ರಸ್ತರು ಅಪ್ರಾಪ್ತರು ಎಂಬುದು ಇಲ್ಲಿ ಗಮನಿಸಬೇಕಾದ ಅಂಶ.