ಕಾರವಾರದಲ್ಲಿ ಮತ್ತೆ ಗ್ಯಾಂಗ್ ವಾರ್ ನೆನಪು ; ತನ್ನ ಪತ್ನಿಯನ್ನೆ ಕೊಂದು ಸುದ್ದಿಯಲ್ಲಿ ಚಂದ್ರು

ವಿಶೇಷ ವರದಿ

ಕಾರವಾರ : ತನ್ನ ಸಾಫ್ಟವೇರ್ ಪತ್ನಿಯನ್ನು ಕೊಂದು ಶನಿವಾರ ಬಂಧಿತನಾಗಿರುವ ಹೋಟೆಲ್ ಉದ್ಯಮಿ ಚಂದ್ರಕಾಂತ ಕೊಂಡ್ಲಿ ಅಲಿಯಾಸ್ ಚಂದ್ರು ಒಂದು ಕಾಲದಲ್ಲಿ ಭೂಗತ ದೊರೆ ಕಾರವಾರ ಮೂಲದ ದಿಲೀಪ ನಾಯಕನನ್ನು ಕೊಂದು ಕುಖ್ಯಾತಿ ಗಳಿಸಿದ್ದ. ಚಂದ್ರು ಈಗ ನಡೆಸಿದ ತನ್ನ ಪತ್ನಿ ಅಕ್ಷತಾಳ ಕೊಲೆಯಿಂದ ಕಾರವಾರದಲ್ಲಿ ಒಂದೂವರೆ ದಶಕಗಳ ಹಿಂದೆ ನಡೆದಿದ್ದ ರಕ್ತಸಿಕ್ತ ಗ್ಯಾಂಗ್ ವಾರ್ ನೆನಪು ಮತ್ತೆ ಮರುಕಳಿಸುವಂತಾಗಿದೆ.

ಕಾರವಾರದ ಬಂದರು ಹಾಗೂ ಕಳ್ಳಸಾಗಾಣಿಕೆಗಾಗಿ ಕಡಲತಡಿಯ ಹತೋಟಿಗಾಗಿ ನಡೆದಿದ್ದ ಆ ಗ್ಯಾಂಗ್ ವಾರದಲ್ಲಿ ಮುಂಬೈನ ಭೂಗತ ಜಗತ್ತಿನ ನೆರಳು ಕಂಡು ಬಂದಿತ್ತು. ಈ ಕಾಳಗದಲ್ಲಿ ಆಗಿನ ಕಾಂಗ್ರೆಸ್ ಶಾಸಕ ವಸಂತ ಅಸ್ನೋಟಿಕರ್ ಹಾಗೂ ಭೂಗತ ದೊರೆ ದಿಲೀಪ ನಾಯಕ ಸೇರಿದಂತೆ ಸರಣಿ ಹತ್ಯೆಗಳು ನಡೆದು ಹೋಗಿದ್ದವು. ಆ ಹತ್ಯೆಗಳ ಸರಮಾಲೆಯಲ್ಲಿ ನಡೆದಿದ್ದ ದಿಲೀಪ ಕೊಲೆ ಪ್ರಕರಣದಲ್ಲಿ ಈ ಚಂದ್ರು ಆರೋಪಿ ನಂಬರ್ ಮೂರು ಎಂದು ಗುರುತಿಸಲ್ಪಟ್ಟಿದ್ದ. ಆದರೆ ಸಾಕ್ಷಾಧಾರಗಳ ಕೊರತೆಯಿಂದ ಕೋರ್ಟ್ ಈತನನ್ನು ಹಾಗೂ ಇತರ ಆರೋಪಿಗಳನ್ನು ದೋಷಮುಕ್ತಗೊಳಿಸಿತ್ತು.

ದಿಲೀಪ ಕೊಲೆ ಅರೋಪ ಚಂದ್ರುವಿಗೆ ಭೂಗತ ಲೋಕದಲ್ಲಿ ಹೊಸ ಬೆಲೆ ಕೊಟ್ಟಿತ್ತು. ಈತನನ್ನು ಕಾರವಾರದ ರಾಜಕಾರಣಿಯೊಬ್ಬರು ಹಣಕಾಸಿನ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತನ್ನ ವಿರೋಧಿಗಳನ್ನು ಬೆದರಿಸಲು ಉಪಯೋಗಿಸುತ್ತಿದ್ದರು ಎಂಬ ಆರೋಪವಿದೆ. ಅಲ್ಲದೇ ಈ ರಾಜಕಾರಣಿ ಬೆಂಗಳೂರಿನಲ್ಲಿ ನಡೆಸುತ್ತಿರುವ ಹೋಟೆಲ್ ಒಂದರಲ್ಲಿ ಚಂದ್ರು ಸಹ ಪಾಲುದಾರನಾಗಿದ್ದಾನೆ ಎನ್ನಲಾಗಿದೆ. ಈತ ಎಸ್ಸೆಸ್ಸೆಲ್ಸಿ ಪಾಸಾಗದಿದ್ದರೂ ಇಂಜಿನೀಯರ್ ಒಬ್ಬಳನ್ನು ಪ್ರೀತಿಸಿ ಮದುವೆ ಆಗಿದ್ದನೆಂದರೆ ಈತ ಅದೆಷ್ಟು ದುಡ್ಡು ಮಾಡಿರಬಹುದು ಎಂದು ಊಹಿಸಬಹುದು ಎಂಬ ಮಾತು ಕೇಳಿಬರುತ್ತಿದೆ.

ಕಾರವಾರದ ಜನ ಮಾನಸದಿಂದ ಕ್ರಮೇಣ ದೂರವಾಗುತ್ತಿದ್ದ ಈತ ಈಗ ಮತ್ತೊಂದು ಕ್ರಿಮಿನಲ್ ಕೇಸಿಗೆ ಕೈಹಾಕಿ ಸ್ವಂತ ಪತ್ನಿಯನ್ನೇ ಕೊಂದು ಮತ್ತೆ ಸುದ್ದಿಯಲ್ಲಿದ್ದಾನೆ. ಈತನ ಹೈ ಕನೆಕ್ಷನ್ ಹಾಗೂ ರಾಜಕಾರಣಿಗಳ ಒಡನಾಟದಿಂದ ಪ್ರಕರಣ ಮತ್ತೆ ಯಾವ ದಾರಿ ಹಿಡಿಯಬಹುದು ಎಂದು ಊಹಿಸುವುದೂ ಕಷ್ಟ ಎನ್ನುತ್ತಾರೆ ಈತನನ್ನು ಹತ್ತಿರದಿಂದ ಬಲ್ಲವರು.

 

LEAVE A REPLY