ಬಯಲು ಪ್ರದೇಶದಲ್ಲಿ ಶೌಚ ಮಾಡುತ್ತಿದ್ದ ಮಹಿಳೆಯರ ಫೋಟೋ ಕ್ಲಿಕ್ಕಿಸಿದವರ ಆಕ್ಷೇಪಿಸಿದ ವ್ಯಕ್ತಿಗೆ ಹೊಡೆದು ಕೊಲೆ

 ಪ್ರತಾಪಗಢ (ರಾಜಸ್ತಾನ) : ಬಯಲು ಪ್ರದೇಶದಲ್ಲಿ ಮಲವಿಸರ್ಜನೆ ಮಾಡುತ್ತಿದ್ದ ಕೆಲವು ಮಹಿಳೆಯರ ಫೋಟೋ ಕ್ಲಿಕ್ಕಿಸುತ್ತಿದ್ದ ಪ್ರತಾಪಗಢ ನಗರ ಪರಿಷತ್ತಿನ ಆಯುಕ್ತ ಹಾಗೂ ಸ್ವಚ್ಛ ಭಾರತ ಆಂದೋಲನಕ್ಕಾಗಿ ಮುನಿಸಿಪಲ್ ಕೌನ್ಸಿಲಿಗೆ ಗೊತ್ತುಪಡಿಸಲಾಗಿದ್ದ ಮೂವರು ಸಿಬ್ಬಂದಿಗೆ ಆಕ್ಷೇಪಿಸಿದ 44 ವರ್ಷದ ವ್ಯಕ್ತಿಯೊಬ್ಬರಿಗೆ ಯದ್ವಾತದ್ವಾ ಥಳಿಸಿ, ಕೊಂದು ಹಾಕಿದ ಬೀಭತ್ಸ ಘಟನೆ ಮೊನ್ನೆ ನಡೆದಿದೆ.

“ಕೊಲೆಗೀಡಾದ ಜಾಫರ್ ಹುಸೇನರ (44) ಕುಟುಂಬಿಕರು ನೀಡಿದ ದೂರಿನನ್ವಯ ನಗರ ಪರಿಷತ್ ಆಯುಕ್ತ ಅಶೋಕ್ ಜೈನ್ ಮತ್ತು ಮುನಿಸಿಪಲ್ ಸಿಬ್ಬಂದಿ ಕಮಲ್ ಹರಿಜನ್, ರಿತೇಶ್ ಹರಿಜನ್ ಮತ್ತು ಮನೀಶ್ ಹರಿಜನ್ ವಿರುದ್ಧ ಐಪಿಸಿ ಸೆಕ್ಸನ್ 302ರಡಿ (ಕೊಲೆ) ಎಫ್ ಐ ಆರ್ ದಾಖಲಿಸಿಕೊಳ್ಳಲಾಗಿದೆ” ಎಂದು ಪ್ರತಾಪಗಢದ ಠಾಣಾಧಿಕಾರಿ ಮಂಗಿಲಾಲ್ ಬಿಷ್ಣೋಯಿ ತಿಳಿಸಿದರು. ಏತನ್ಮಧ್ಯೆ, ಜೈನ್ ತನ್ನ ಮೇಲಿನ ಆರೋಪ ನಿರಾಕರಿಸಿದ್ದಾರೆ. ಜಾಫರ್ ಸಹೋದರ ನೂರ್ ಮೊಹಮ್ಮದ್ ದೂರು ನೀಡಿದ್ದಾರೆ. “ಮೊನ್ನೆ ಮುಂಜಾನೆ ಸುಮಾರು 6 ಗಂಟೆಗೆ ನಮ್ಮ ಕುಚ್ಚಿ ಬಸ್ತಿ ಮೆಹ್ತಾಬ್ ಶಾಹ ಬಸ್ತಿ ಹತ್ತಿರ ಕೆಲವು ಮಹಿಳೆಯರು ಬಹಿರ್ದೆಸೆಗೆ ಕುಳಿತ್ತಿದ್ದರು. ಅಲ್ಲಿಗೆ ಆಗಮಿಸಿದ ಆಯುಕ್ತ ಜೈನ್ ಹಾಗೂ ಇತರ ಮೂವರು ಸಿಬ್ಬಂದಿ ಮತ್ತು ಇತರರು ಮಹಿಳೆಯರ ಫೋಟೋ ತೆಗೆಯಲು ಪ್ರಾರಂಭಿಸಿದರು. ಇದಕ್ಕೆ ಜಾಫರ್ ಆಕ್ಷೇಪಿಸಿದಾಗ, ಎಲ್ಲರೂ ಸೇರಿ ಲಾಠಿಯಿಂದ ಹೊಡೆದಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕೊಲೆಗಾರರನ್ನು ಗುರುತಿಸಲು ಮಹಿಳೆಯರ ಸಹಿತ ಉಳಿದವರು ಸಮರ್ಥರಿದ್ದಾರೆ” ಎಂದು ನೂರ್ ಹೇಳಿದ್ದಾರೆ.