ಬಪ್ಪನಾಡು ಸೇತುವೆಯಿಂದ ಹಾರಿ ಆತ್ಮಹತ್ಯೆ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ರಾಷ್ಟ್ರೀಯ ಹೆದ್ದಾರಿ 66ರ ಬಪ್ಪನಾಡು ಸೇತುವೆಯಿಂದ ಹಾರಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಸಂಜೆ ವೇಳೆಗೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಸ್ಥಳೀಯ ನಿವಾಸಿ ಭಾಸ್ಕರ ಕರ್ಕೆರ (65) ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿಯು ಮುಲ್ಕಿ ಬಸ್ ನಿಲ್ದಾಣದ ಬಳಿಯಲ್ಲಿ ಕೆಲ ವರ್ಷಗಳ ಹಿಂದೆ ತರಕಾರಿ ವ್ಯಾಪಾರ ನಡೆಸುತ್ತಿದ್ದರು. ಬಳಿಕ ಅನಾರೋಗ್ಯದ ನಿಮಿತ್ತ ಮನೆಯಲ್ಲೇ ಇದ್ದರು ಎನ್ನಲಾಗಿದೆ. ಮಂಗಳವಾರ ಸಂಜೆ ಸುಮಾರು 3 ಗಂಟೆ ಹೊತ್ತಿಗೆ ಬಪ್ಪನಾಡು ಸೇತುವೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಸ್ಥಳೀಯರು ತಿಳಿಸಿದ್ದಾರೆ. ಅರ್ಧಗಂಟೆಯಲ್ಲಿ ಸ್ಥಳೀಯರಿಗೆ ಶವ ಮೇಲೆ ತೇಲುತ್ತಿದ್ದುದು ತಿಳಿದುಬಂದಿದ್ದು ಕೂಡಲೇ ಪೊಲೀಸರಿಗೆ ತಿಳಿಸಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.