ಮಗು ಜತೆ ತಂದೆ ಬಾವಿಗೆ ಹಾರಿ ಸಾವು, ಪತ್ನಿ ರಕ್ಷಣೆ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಬುಧವಾರ ನೂತನ ಮನೆಯ ಗೃಹಪ್ರವೇಶಕ್ಕೆ ಸಿದ್ಧತೆ ನಡೆಸುತ್ತಿರುವ ಮಧ್ಯೆ ಹತ್ತು ತಿಂಗಳ ಹಸುಳೆಯೊಂದಿಗೆ ತಂದೆ ಮಂಗಳವಾರ ರಾತ್ರಿ ಆತ್ಮಹತ್ಯೆಗೈದ ಘಟನೆ ಪುಂಡೂರು ಸಮೀಪದ ಕಡಪ್ಪು ಎಂಬಲ್ಲಿ ನಡೆದಿದೆ. ಪತಿ ಹಾಗೂ ಪುತ್ರ ಬಾವಿಗೆ ಹಾರಿದ್ದನ್ನು ನೋಡಿ ಪತ್ನಿಯೂ ಬಾವಿಗೆ ಹಾರಿದ್ದು, ನಾಗರಿಕರು ರಕ್ಷಿಸಿದ್ದಾರೆ.

ಕಡಪ್ಪು ನಿವಾಸಿ ಮುಹಮ್ಮದ್ ಕುಂಞÂ (34) ಹಾಗೂ ಪುತ್ರ ಅಶ್ರಫ್ (10 ತಿಂಗಳು) ಎಂಬವರು ಮೃತರಾದವರು. ತರವಾಡು ಮಣೆ ಸನಿಹ ಮುಹಮ್ಮದ್ ಕುಂಞ ನೂತನ ಮನೆ ನಿರ್ಮಿಸಿದ್ದರು. ಮನೆಯ ಗೃಹಪ್ರವೇಶ ಬುಧವಾರ ರಾತ್ರಿ ಮತ್ತು ಗುರುವಾರ ನಡೆಸಲು ತೀರ್ಮಾನಿಸಲಾಗಿತ್ತು. ಇದರಿಂದ ಮನೆಯ ವಿದ್ಯುತ್ ವಯರಿಂಗ್ ಕೆಲಸ ಮಂಗಳವಾರ ನಡೆದಿತ್ತು. ಆದರೆ ಸಂಜೆ ಮುಹಮ್ಮದ್ ಕುಂಞ ಮತ್ತು ಪುತ್ರ ನಿಗೂಢವಾಗಿ ನಾಪತ್ತೆಯಾದರು. ಹುಡುಕಾಟದಲ್ಲಿ ಮನೆಯಿಂದ ಅಲ್ಪದೂರದ ತೋಟದ ಆವರಣ ರಹಿತ ಬಾವಿಯಲ್ಲಿ ಮಗು ತೇಲುತ್ತಿರುವುದನ್ನು ಕಂಡು ಪತ್ನಿ ಜಮೀಲಾ ಬಾವಿಗೆ ಹಾರಿದ್ದು, ಬೊಬ್ಬೆ ಕೇಳಿ ಸಂಬಂಧಿಕರಾದ ಅಬೂಬಕರ್ ದೌಡಾಯಿಸಿದರು. ಕೂಡಲೇ ಅವರು ನಾಗರಿಕರನ್ನು ಕರೆಸಿ ಜಮೀಲಾ ಹಾಗೂ ಮಗುವನ್ನು ಮೇಲೆತ್ತಿದರು. ಅಷ್ಟರಲ್ಲಿ ಮಗು ಕೊನೆಯುಸಿರೆಳೆದಿತ್ತು. ಬಳಿಕ ಅಗ್ನಿಶಾಮಕ ದಳ ಬಂದು ಬಾವಿಯಲ್ಲಿ ಶೋಧ ನಡೆಸಿದಾಗ ಕೆಸರಲ್ಲಿ ಹೂತಿದ್ದ ಮುಹಮ್ಮದ್ ಕುಂಞಯ ಶವ ಪತ್ತೆಯಾಯಿತು. ಶವಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿ ಬುಧವಾರ ಅಂತ್ಯಸಂಸ್ಕಾರ ನಡೆಸಲಾಯಿತು.

ಮುಹಮ್ಮದ್ ಕುಂಞ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೈಯ್ಯಲು ಕಾರಣವೇನೆಂದು ತಿಳಿದುಬಂದಿಲ್ಲ. ಘಟನೆಯ ಬಗ್ಗೆ ಆದೂರು ಪೆÇೀಲೀಸರು ದೂರು ದಾಖಲಿಸಿದ್ದಾರೆ.