ಗೆಳತಿ ಅತ್ಯಾಚಾರಗೈದು ಅಶ್ಲೀಲಚಿತ್ರ ಫೇಸ್ಬುಕ್ಕಿಗೆ ಹಾಕಿದವಗೆ ವರ್ಷ ಜೈಲು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಗೆಳತಿಯನ್ನು ಅತ್ಯಾಚಾರ ನಡೆಸಿದ್ದಷ್ಟೇ ಅಲ್ಲದೇ ಆಕೆಯ ಅಶ್ಲೀಲ ಭಂಗಿಯ ಚಿತ್ರಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ ಅಪರಾಧಿಗೆ ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಒಂದು ವರ್ಷ ಕಠಿಣ ಸಜೆ ಮತ್ತು 12 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದೆ.

ಸುಳ್ಯ ಅಲೆಟ್ಟಿ ಮೊರಂಗಲ್ಲು ನಿವಾಸಿ ಕುಸುಮಾಧರ (30) ಶಿಕ್ಷೆಗೊಳಗಾದ ಅಪರಾಧಿ. ಕುಸುಮಾಧರನಿಗೆ ಸುಳ್ಯದ ಯುವತಿಯೊಬ್ಬಳು ಸಮಾರಂಭವೊಂದರಲ್ಲಿ ಪರಿಚಯವಾಗಿ ಬಳಿಕ ಆಕೆಯೊಂದಿಗೆ ಒಡನಾಟ ಹೆಚ್ಚಿಸಿಕೊಂಡಿದ್ದ. ತಾನು ಬೆಂಗಳೂರಿನಲ್ಲಿ ಕೈತುಂಬ ಸಂಬಳ ಬರುವ ಕೆಲಸದಲ್ಲಿದ್ದೇನೆ ಎಂದು ಸುಳ್ಳು ಹೇಳಿದ್ದ.

2013ರ ಏಪ್ರಿಲ್ 14ರಂದು ಈಕೆಯನ್ನು ಭೇಟಿ ಮಾಡಲು ಬಂದ ಕುಸುಮಾಧರ ಸಂಜೆ ಹೊತ್ತು ಬಸ್ ಸಿಗಲಿಲ್ಲ ಎಂದು ನೆಪ ಹೇಳಿ ಆಕೆಯ ಬಾಡಿಗೆ ಮನೆಯಲ್ಲಿಯೇ ಉಳಿದುಕೊಂಡು ಬಿಟ್ಟಿದ್ದ. ಆಕೆಯೊಂದಿಗೆ ದೈಹಿಕ ಸುಖ ಅನುಭವಿಸಿದ್ದ. ಸ್ವಲ್ಪ ದಿನಗಳ ಬಳಿಕ ಕುಸುಮಾಧರ ಈಕೆಯನ್ನು ಬ್ಲ್ಯಾಕ್ಮೇಲ್ ಮಾಡಲು ಶುರು ಮಾಡಿದ್ದಾನೆ. “ನನ್ನ ಬಳಿ ಅಶ್ಲೀಲ ವಿಡಿಯೋ ಇಟ್ಟುಕೊಂಡಿದ್ದೇನೆ. ನೀನು 5 ಲಕ್ಷ ರೂ ಕೊಡಬೇಕು. ಇಲ್ಲದೇ ಇದ್ದರೆ ತನ್ನ ಬಳಿ ಇರುವ ನಿನ್ನ ನೀಲಿ ಚಿತ್ರವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಅಪ್ಲೋಡ್ ಮಾಡುತ್ತೇನೆ” ಎಂದು ಹೆದರಿಸಿದ್ದ. ಆದರೆ ಆಕೆ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಕಿಡಿಗೇಡಿ ಕುಸುಮಾಧರ ತಾನು ಆಕೆಯೊಂದಿಗೆ ಕಳೆದ ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿಯೇಬಿಟ್ಟ.  ಈ ವಿಚಾರ ಯುವತಿ ಸಂಬಂಧಿಕರಿಗೆ ಗೊತ್ತಾಗಿ ಜೂನ್ 19ರಂದು ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸೈಬರ್ ಕ್ರೈಂ ಸೇರಿದಂತೆ 19 ಸಾಕ್ಷಿಗಳನ್ನು ವಿಚಾರಣೆ ಮಾಡಿದ್ದರು. ಅಲ್ಲದೆ ಮೊಬೈಲ್ ಫೋನ್ ಮತ್ತು 26 ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.