ಕಿಟಕಿಗೆ ನೇಣು ಬಿಗಿದು ಆತ್ಮಹತ್ಯೆ !

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಇತ್ತೀಚಿಗಷ್ಟೇ ಹೊಸ ಮನೆಯ ಗೃಹ ಪ್ರವೇಶ ಮಾಡಿದ್ದ ವ್ಯಕ್ತಿಯೊಬ್ಬರು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಿಟಕಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪಡುಬಿದ್ರಿ ಬ್ರಹ್ಮಸ್ಥಾನ ಬಳಿಯ ಕಾಡಿಪಟ್ಣ ನಿವಾಸಿ ರಾಜೇಶ್ ಮೆಂಡನ್ (40) ಮೃತ ವ್ಯಕ್ತಿ. ಇವರು ಸುರತ್ಕಲ್ ಎನೈಟಿಕೆಯ ಅಗ್ನಿಶಾಮಕ ದಳದಲ್ಲಿ ಕರ್ತವ್ಯದಲ್ಲಿದ್ದು, ಮಂಗಳವಾರ ಮಧ್ಯಾಹ್ನದ ಬಳಿಕ ಸೇವೆಗೆ ಹಾಜರಾಗಬೇಕಿತ್ತು. ಮನೆಯಲ್ಲಿ ಶಿಕ್ಷಕಿ ಪತ್ನಿ ಹಾಗೂ ಒಬ್ಬ ಮಗಳೊಂದಿಗೆ ವಾಸವಾಗಿದ್ದ ಇವರು ಕಳೆದ ಕೆಲವು ದಿನಗಳಿಂದ ಬಹಳ ಖಿನ್ನರಾಗಿದ್ದರು. ಮಗಳನ್ನು ಕರೆದುಕೊಂಡು ಶಿಕ್ಷಕಿ ಪತ್ನಿ ಶಾಲೆಗೆ ಹೋಗಿದ್ದು, ಮನೆಯಲ್ಲಿ ಒಬ್ಬನೇ ಇರುವ ಗಂಡನ ಮೊಬೈಲಿಗೆ ಕರೆ ಮಾಡಿದರೂ ಸ್ವೀಕರಿಸದಿರುವುದರಿಂದ ಪಕ್ಕದ ಮನೆಗೆ ಕರೆ ಮಾಡಿ ವಿಚಾರಿಸಿದ್ದು, ಸ್ಥಳೀಯರು ಬಂದು ನೋಡಿದಾಗ ಕಿಟಕಿಯಲ್ಲಿ ಮನೆ ಯಜಮಾನ ನೇತಾಡುತ್ತಿದ್ದರು. ಅಷ್ಟರಲ್ಲೇ ಪ್ರಾಣಪಕ್ಷಿ ಹಾರಿಹೋಗಿದ್ದರಿಂದ ಸ್ಥಳಕ್ಕೆ ಆಗಮಿಸಿದ ಪೊಲೀಸರ ಸಮ್ಮುಖದಲ್ಲಿ ಶವವನ್ನು ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ಮಾಡಲಾಗಿದೆ.

ಕೆಲವೇ ದಿನಗಳ ಹಿಂದೆಯಷ್ಟೇ ಗೃಹ ಪ್ರವೇಶ ಮಾಡಿಕೊಂಡಿದ್ದ ವ್ಯಕ್ತಿ ನಾಲ್ಕು ದಿನಗಳ ಹಿಂದೆ ಖಿನ್ನತೆಗೊಳಗಾಗಲು ಏನು ಕಾರಣ ? ಅದೂ ಕೂಡಾ ಪ್ರಾಣ ಕಳೆದುಕೊಳ್ಳುವಂತಹ, ಅದೂ ತನ್ನ ಹೊಸ ಮನೆಯಲ್ಲೇ, ತಾನು ಗತವಾದರೂ ತನ್ನ ಪತ್ನಿ ಮಗಳು ಬಾಳಿ ಬದುಕಬೇಕಾದ ಮನೆಯಲ್ಲೇ ಈ ಕೃತ್ಯ ಮಾಡಿಕೊಳ್ಳಲು ಕಾರಣ ಏನೆಂಬುದು ಪೊಲೀಸ್ ತನಿಖೆಯಿಂದಷ್ಟೇ ತಿಳಿದು ಬರಲಿದೆ ಎಂಬುದು ಸಾರ್ವಜನಿಕರ ಮಾತು. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.