ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ಅವಿವಾಹಿತ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಪ್ಪಿನಂಗಡಿಯ ನೇತ್ರಾವತಿ ನದಿ ದಡದಲ್ಲಿ ಶುಕ್ರವಾರ ಬೆಳಕಿಗೆ ಬಂದಿದೆ.

ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಕರ್ಮಿನಡ್ಕದ ಮತ್ತಡಿ ಎಂಬವರ ಪುತ್ರ ರಮೇಶ (33) ಆತ್ಮಹತ್ಯೆ ಮಾಡಿಕೊಂಡ ಯುವಕ. ಚರ್ಮ ರೋಗದಿಂದ ಬಳಲುತ್ತಿದ್ದ ಈತ ಚಳಿಗಾಲದಲ್ಲಿ ಅದು ಉಲ್ಭಣವಾಗುತ್ತಿರುವುದರಿಂದ ಮನನೊಂದಿದ್ದ. ತನ್ನ ಅಣ್ಣನ ಮದುವೆಯ ಹಿಂದಿನ ದಿನ ಡಿ 17ರಂದು ಕೆಲವು ಬಟ್ಟೆಬರೆಗಳನ್ನು ಹಿಡಿದುಕೊಂಡು ಮನೆ ಬಿಟ್ಟಿದ್ದ. ಶುಕ್ರವಾರ ಬೆಳಗ್ಗೆ ಉಪ್ಪಿನಂಗಡಿಯ ವನಭೋಜನ ಶ್ರೀ ಆಂಜನೇಯ ದೇವಸ್ಥಾನದ ಸಮೀಪ ನದಿ ದಡದಲ್ಲಿ ತನ್ನಲ್ಲಿದ್ದ ಬೆಡ್ ಶೀಟ್ ಹಾಸಿ, ವಿಷ ಸೇವಿಸಿ ಅದರಲ್ಲಿ ಮಲಗಿದ್ದ ಸ್ಥಿತಿಯಲ್ಲಿ ಈತನ ಶವ ಪತ್ತೆಯಾಗಿದೆ.

ಡೆತ್ ನೋಟ್

ಮೃತನ ಬಳಿ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಶಾಸಕರಿಗೆ ಬರೆದ ಡೆತ್ ನೋಟ್ ಪತ್ತೆಯಾಗಿದ್ದು, ಇದರಲ್ಲಿ ಈತನ ಸಾವಿಗೆ ಸಂಬಂಧಿಸಿದ ಯಾವುದೇ ವಿಚಾರಗಳಿಲ್ಲದೆ, ಮಾನಸಿಕ ಅಸ್ವಸ್ಥರಂತೆ ಪಕ್ಕದ ಮನೆಯವರ, ಊರಿನವರ ವಿಚಾರಗಳನ್ನು ಬರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತನ ಸಹೋದರ ಮೋನಪ್ಪ ಎಂಬವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶುಕ್ರವಾರ ಬೆಳಗ್ಗೆ ಸುಮಾರು 9 ಗಂಟೆಗೆ ರಮೇಶ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿತ್ತಲ್ಲದೆ, 10 ಗಂಟೆಯ ಸುಮಾರಿಗೆ ಈತನ ಬಂಧುಗಳು ಉಪ್ಪಿನಂಗಡಿಗೆ ಆಗಮಿಸಿದ್ದರು. ಆದರೆ, ಶವವನ್ನು ಪುತ್ತೂರಿಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸುವಾಗ ಸಂಜೆ 4:25 ಆಗಿತ್ತು. ಈ ವಿಳಂಬದ ಬಗ್ಗೆ ಮೃತನ ಅಣ್ಣನಲ್ಲಿ ಪ್ರಶ್ನಿಸಿದಾಗ ವೃತ್ತ ನಿರೀಕ್ಷಕರು ಇರಲಿಲ್ಲವಂತೆ ಎನ್ನುವ ಉತ್ತರ ಬಂತು.

ಮರಣೋತ್ತರ ಪರೀಕ್ಷೆಗೂ ವೃತ್ತ ನಿರೀಕ್ಷಕರಿಗೂ ಏನು ಸಂಬಂಧ ? ದುರ್ಬಲ ವರ್ಗದವರಿಗೆ ಸರಕಾರ ಇಷ್ಟೊಂದು ಅನುಕೂಲತೆಗಳನ್ನು ಮಾಡಿದರೂ ಬೆಳಗ್ಗೆಯಿಂದ ಸಂಜೆಯ ತನಕ ಮೃತನ ಬಂಧುಗಳು ಮರಣೋತ್ತರ ಪರೀಕ್ಷೆಗಾಗಿ ಶವ ಪಡೆಯಲು ಕಾಯುವಂತಾಗಿದ್ದು ಮಾತ್ರ ದುರ್ಬಲರಿಗೆ ಸರಕಾರಗಳು ಯಾವ ರೀತಿ ಸ್ಪಂದಿಸುತ್ತವೆ ಎಂಬುದನ್ನು ತೋರಿಸುತ್ತದೆ.