ತಂದೆ ಕೊಂದವ ಸೆರೆ

ಬಂಧಿತ ಅಬೂಬಕ್ಕರ್

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ಆಸ್ತಿ ವಿಚಾರಕ್ಕೆ ಸಂಬಂಧಿಸಿ ತಂದೆಗೆ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ದ ಕ ಜಿಲ್ಲಾ ಅಪರಾಧ ಪತ್ತೆ ದಳ ಹಾಗೂ ಉಪ್ಪಿನಂಗಡಿ ಪೊಲೀಸರ ತಂಡ ಮಂಗಳವಾರ ಬಂಟ್ವಾಳ ತಾಲೂಕಿನ ಗಡಿಯಾರ ಎಂಬಲ್ಲಿ ಬಂಧಿಸಿದೆ.

ಉಪ್ಪಿನಂಗಡಿಯ ರಾಮನಗರದ ಕುದ್ಲೂರು ನಿವಾಸಿ ಅಬೂಬಕ್ಕರ್ ಯಾನೆ ಮೋನು (35) ಬಂಧಿತ ಆರೋಪಿ. ಆದಂ (55) ಎಂಬವರು ಮಗನಿಂದಲೇ ಕೊಲೆಯಾದ ವ್ಯಕ್ತಿ. ಈತ ಕಳೆದ ಶನಿವಾರ ಉಪ್ಪಿನಂಗಡಿಯ ಹಳೆ ಬಸ್ ನಿಲ್ದಾಣದ ಸಮೀಪವಿರುವ ತನ್ನ ತರಕಾರಿ ಅಂಗಡಿಯಲ್ಲಿ ಆಸ್ತಿ ವಿಚಾರವಾಗಿ ತಂದೆ ಆದಂರೊಂದಿಗೆ ಜಗಳವಾಡಿ, ತಂದೆಗೆ ರಾಡಿನಿಂದ ಹಲ್ಲೆ ನಡೆಸಿದ್ದ. ಬಳಿಕ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಭಾನುವಾರ ತನಕ ಅಲ್ಲಿಯೇ ಇದ್ದ. ಆದರೆ ತಂದೆಗೆ ಪ್ರಜ್ಞೆ ಬಾರದಿರುವುದನ್ನು ಗಮನಿಸಿ ಭಾನುವಾರ ಮಧ್ಯಾಹ್ನ ಅಲ್ಲಿಂದ ತಲೆಮರೆಸಿಕೊಂಡಿದ್ದ. ಸೋಮವಾರ ಬೆಳಗ್ಗೆ ಆದಂ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಬಳಿಕ ಅಬೂಬಕ್ಕರ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನ ಪತ್ತೆಗೆ ಬಲೆ ಬೀಸಿದ್ದರು.

ದ ಕ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಬೊರಸೆ ನಿರ್ದೇಶನದಂತೆ ಆರೋಪಿ ಪತ್ತೆಗಾಗಿ ಪುತ್ತೂರು ಗ್ರಾಮಾಂತರ ಇನಸ್ಪೆಕ್ಟರ್ ಅನಿಲ್ ಕುಲಕರ್ಣಿ, ಅಪರಾಧ ಪತ್ತೆ ದಳದ ಅಮಾನುಲ್ಲಾ ನೇತೃತ್ವದ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು. ಮಂಗಳವಾರ ಬೆಳಗ್ಗೆ ಆರೋಪಿಯು ಬೆಂಗಳೂರಿಗೆ ಪರಾರಿಯಾಗುವ ಸಂಚು ಹೂಡಿ ಗಡಿಯಾರ ಬಸ್ ನಿಲ್ದಾಣದ ಬಳಿ ನಿಂತಿದ್ದಾಗ ಆತನನ್ನು ಬಂಧಿಸುವಲ್ಲಿ ಪೊಲೀಸ್ ತಂಡ ಯಶಸ್ವಿಯಾಗಿದೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.