ಮುಸ್ಲಿಮನ ಗಾಯಗೊಳಿಸಿ, ಸುಟ್ಟು ಕೊಲೆ

ನವದೆಹಲಿ : ರಾಜಸ್ತಾನದ ರಾಜಸ್ಮಂದಿನಲ್ಲಿ ಲವ್ ಜಿಹಾದಿಗೆ ಸಂಬಂಧಿಸಿ ಮುಸ್ಲಿಂ ವ್ಯಕ್ತಿಯೊಬ್ಬನಿಗೆ ಹರಿತವಾದ ಅಸ್ತ್ರಗಳಿಂದ ಕಡಿದು, ಬೆಂಕಿಕೊಟ್ಟು ಕೊಲೆಗೈದ ಅಮಾನವೀಯ ಭೀಕರ ಅಪರಾಧ ಘಟನೆ ನಡೆದಿದೆ.

ವ್ಯಕ್ತಿ ಅರೆಸುಟ್ಟ ಶವ ರಸ್ತೆಯಲ್ಲಿ ಗುರುವಾರ ಪತ್ತೆಯಾಗಿದೆ. ಕೊಲೆಗೀಡಾದ ವ್ಯಕ್ತಿ ಮೊಹಮ್ಮದ್ ಅಫ್ರಝುಲ್ (48) ಆಗಿದ್ದು, ಇವರು ಪಟ್ಟಣದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರೆಂದು ಪೊಲೀಸರು ತಿಳಿಸಿದರು.

ದುಷ್ಕರ್ಮಿಗಳು ಹಲ್ಲೆ ನಡೆಸಿದಾಗ ಇವರು ಬೊಬ್ಬೆ ಹಾಕಿದ್ದು, ಯಾರೂ ಹತ್ತಿರ ಸುಳಿಯಲಿಲ್ಲ.  ಈ ಕೊಲೆಯ ಹಿಂದೆ ಹಿಂದೂ ಯುವತಿಯರನ್ನು ಮುಸ್ಲಿಮರಿಗೆ ವಿವಾಹ ಮಾಡುತ್ತಿರುವ `ಲವ್ ಜಿಹಾದಿ’ನ ವಿರುದ್ಧ ಹಿಂದೂಪರ ಸಂಘಟನೆಗಳ ಕಾರ್ಯಾಚರಣೆ ಇದೆ ಎನ್ನಲಾಗಿದೆ.

“ಜಿಹಾದಿಗಳಾಗಿದ್ರೆ ನಿಮಗೆ ಕೆಟ ಕಾಲ ಬಂದಿದೆ.  ಭಾರತದಲ್ಲಿ ಲವ್ ಜಿಹಾದಿ ನಿಲ್ಲಿಸಿ ಅಥವಾ ಇವನಂತೆ ಸಾಯಲು ಸಿದ್ಧರಾಗಿ” ಎಂದು ದಾಳಿಕೋರ ಹಿಂದಿಯಲ್ಲಿ ಹೇಳಿದ್ದಾನೆ. ಮೊಹಮ್ಮದಗೆ ಹಲ್ಲೆ ನಡೆಸಿದ ಬಳಿಕ, ಅವರ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ. “ಇದೊಂದು ಬರ್ಬರ ಮತ್ತು ಅಮಾನವೀಯ ಅಪರಾಧ ಕೃತ್ಯ” ಎಂದು ರಾಜಸ್ತಾನ ಡಿಜಿಪಿ ಗಲ್ಹೋತ್ರ ಹೇಳಿದರು.