ಆಕಸ್ಮಿಕ ಕೆರೆಗೆ ಬಿದ್ದು ಯುವಕ ಸಾವು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕುಂದಾಪುರ : ಕೆರೆಯ ಪಕ್ಕದಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿದ ಘಟನೆ ಹಿಲಿಯಾಣ ಗ್ರಾಮ ಪಂಚಾಯತ್ ಆವರ್ಸೆ ಸಮೀಪದ ಬಂಡ್ಸಾಲೆ ಎಂಬಲ್ಲಿ ನಡೆದಿದೆ.

ಮೃತ ಯುವಕನನ್ನು ಹಿಲಿಯಾಣದ ಶಶಿಧರ (21) ಎಂದು ಗುರುತಿಸಲಾಗಿದೆ. ಈ ಕೆರೆಯ ಸುತ್ತಮುತ್ತ ಆವರಣಗೋಡೆ ಇಲ್ಲದ ಕಾರಣ ಅದರ ಪಕ್ಕದಲ್ಲೇ ಹೋಗುತ್ತಿದ್ದ ಶಶಿಧರ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದಿದ್ದಾನೆನ್ನಲಾಗಿದೆ.

ಬೆಂಗಳೂರು ಮೂಲದ ಕಂಪೆನಿಯೊಂದರ ಕಾಲ್ ಸೆಂಟರ್ ಉದ್ಯೋಗಿಯಾಗಿದ್ದ ಶಶಿಧರ ಇತ್ತೀಚಿನ ದಿನಗಳಲ್ಲಿ ಖಿನ್ನತೆಗೆ ಒಳಗಾಗಿದ್ದು, ಇದಕ್ಕೆ ಔಷಧ ತೆಗೆದುಕೊಳ್ಳುತ್ತಿದ್ದರೆಂದು ತಿಳಿದುಬಂದಿದೆ. ಶುಕ್ರವಾರದಂದು ಈತ ಏಕಾಏಕಿ ಕಣ್ಮರೆಯಾಗಿದ್ದು, ಆತಂಕಗೊಂಡ ಮನೆಮಂದಿ ಈತನಿಗಾಗಿ ಹುಡುಕಾಟ ಆರಂಭಿಸಿದ ವೇಳೆ ಈತನ ಚಪ್ಪಲಿಗಳು ಕೆರೆ ನೀರಿನಲ್ಲಿ ತೇಲುತ್ತಿರುವುದು ಕಂಡುಬಂದಿದೆ. ಬಳಿಕ ಶಂಕರನಾರಾಯಣ ಠಾಣಾ ಪೊಲೀಸರಿಗೆ ಮಾಹಿತಿ ರವಾನಿಸಲಾಗಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿಗೂ ಕರೆ ಮಾಡಲಾಯಿತು.

ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಪೊಲೀಸರ ಸಹಕಾರದೊಂದಿಗೆ ಕೆರೆಯಲ್ಲಿ ಹುಡುಕಾಟ ಆರಂಭಿಸಿದ್ದಾರೆ. ಆದರೆ ಅವರಿಗೆ ಶವ ಹುಡುಕಾಡಲು ಸಾಧ್ಯವಾಗಿಲ್ಲ. ಬಳಿಕ ಸ್ಥಳೀಯ ಮಂಜುನಾಥ ಕೊಡ್ಲಾಡಿ ಎಂಬ ಯುವಕ ನೀರಿಗೆ ಧುಮುಕಿ ಶಶಿಧರನ ಮೃತದೇಹವನ್ನು ಕೆರೆಯಿಂದ ಮೇಲಕ್ಕೆತ್ತಿದ್ದಾರೆ.

ಕೃಷ್ಣ ಕುಲಾಲ್ ಎಂಬವರ ದೂರಿನಂತೆ ಶಂಕರನಾರಾಯಣ ಠಾಣಾ ಪೊಲೀಸರು ಆಕಸ್ಮಿಕ ದುರಂತ ಎಂದು ಪ್ರಕರಣ ದಾಖಲಿಸಿಕೊಂಡರು.