ಊರಿಗೆ ಹಬ್ಬವಾದ ಮಳೆ -ಬೆಳೆ ಉತ್ಸವ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : “ಕೆಸರೇ ನಮ್ಮ ಅನ್ನ-ಕೈ ಕೆಸರಾದರೆ ಬಾಯಿ ಮೊಸರು” ಎಂಬ ಧ್ಯೇಯದೊಂದಿಗೆ ಕುಟುಂಬಶ್ರೀಯ ಭತ್ತ ಬೆಳೆ, ಜಲಸಂರಕ್ಷಣಾ ಯಜ್ಞ-2017ರ ಭಾಗವಾಗಿ ಕುಂಬ್ಡಾಜೆ ಗ್ರಾಮ ಪಂಚಾಯತ್ ಮತ್ತು ಕುಟುಂಬಶ್ರೀ ಸಿಡಿಎಸ್ ಸಂಯುಕ್ತಾಶ್ರಯದಲ್ಲಿ ಮಳೆ-ಬೆಳೆ ಮಹೋತ್ಸವ ಬೆಳಿಂಜದ ಭತ್ತದ ಬಯಲಿನಲ್ಲಿ ನಡೆಯಿತು.

ಸಮಾರಂಭವನ್ನು ಕಾರಡ್ಕ ಬ್ಲಾಕ್ ಪಂಚಾಯತು ಅಧ್ಯಕ್ಷೆ ಓಮನ ರಾಮಚಂದ್ರನ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, “ಜನರನ್ನು ಕೃಷಿಯೆಡೆಗೆ ಆಕರ್ಷಿಸುವುದು ಹಾಗು ಗ್ರಾಮೀಣ ಆಟಗಳ ನೆನಪುಗಳನ್ನು ಮರುಕಳಿಸುವಂತೆ ಮಾಡುವುದು ಮತ್ತು ಮಕ್ಕಳಿಗೆ ಕೆಸರುಗದ್ದೆ ಆಟಗಳನ್ನು ಪರಿಚಯಿಸುವ ಈ ಕಾರ್ಯಕ್ರಮ ಶ್ಲಾಘನೀಯ. ಜನರು ಕೃಷಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ನಿತ್ಯೋಪಯೋಗಿ ವಸ್ತುಗಳ ಬೆಲೆಯೇರಿಕೆಯಿಂದ ಮುಕ್ತಿ ಪಡೆಯಲು ತಕ್ಕಮಟ್ಟಿಗೆ ಸಾಧ್ಯವಿದೆ. ಅಂತೆಯೇ ಮನೆಯಲ್ಲೇ ಜೈವಿಕವಾಗಿ ಕೃಷಿ ಮಾಡಿ ವಿಷಮುಕ್ತ ಆಹಾರ ಪಾದಾರ್ಥಗಳನ್ನು ಸೇವಿಸಬಹುದು ಎಂಬ ಸಂದೇಶವನ್ನೂ ಈ ಮೂಲಕ ತಿಳಿಯಪಡಿಸಬಹುದು” ಎಂದು ಹೇಳಿದರು.  ಕಾರ್ಯಕ್ರಮದಂಗವಾಗಿ ಕೆಸರು ಗದ್ದೆ ಓಟ, ನೇಜಿ ನೆಡುವುದು, ಪಾಡ್ದನ, ಬೆಲೂನ್ ಬ್ರೇಕಿಂಗ್, ಹಗ್ಗ ಜಗ್ಗಾಟ, ಲಿಂಬೆ ಚಮಚ ಮುಂತಾದ ಕೆಸರುಗದ್ದೆ ಸ್ಪರ್ಧೆಗಳನ್ನು ನಡೆಸಲಾಯಿತು.

ಪೂಮಾಣಿ-ಕಿನ್ನಿಮಾಣಿ ಯುವಕೇಂದ್ರ ಬೆಳಿಂಜ ಹಾಗೂ ಓಂಕಾರ್ ಕ್ಲಬ್ ಆಲಿಂಜ ಹಾಗೂ ಬೆಳಿಂಜ ಎ ಎಲ್ ಪಿ ಶಾಲೆಯ ಅಧ್ಯಾಪಕರು, ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಪೂರ್ಣ ಸಹಕಾರವನ್ನಿತ್ತರು.