`ಕೊಲ್ಲೂರು ದೇವಳ ಸೂಚನಾ ಫಲಕದಲ್ಲಿ ಮಲಯಾಳಂ ಭಾಷೆ ಬಳಕೆ ಮಾಡಬೇಡಿ’

ಉಡುಪಿ : ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಅಧಿಕೃತ ಸಂದೇಶದ ಸೂಚನಾ ಫಲಕಗಳಲ್ಲಿ ಮಲಯಾಳಂ ಭಾಷೆ ಬಳಸುತ್ತಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ಹಲವು ಬಾರಿ ಆಕ್ಷೇಪಿಸುತ್ತಾ ಬಂದಿದೆ.

ಅದೇ ರೀತಿ ಬುಧವಾರ ದೇವಸ್ಥಾನವನ್ನು ಸಂದರ್ಶಿಸಿದ ಜಿಲ್ಲಾ ಉಸ್ತುವಾರಿ ತೇಗೂರು ಜಗದೀಶ್ ಅರಸ್ ಚಿಕ್ಕಮಗಳೂರುರವರು ದೇವಸ್ಥಾನದಲ್ಲಿ ಮಲಯಾಳಂ ಫಲಕಗಳ ಬಗ್ಗೆ ಮಾತನಾಡುತ್ತಾ, “ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಅಳವಡಿಸಲಾಗಿರುವ ಹೆಚ್ಚಿನ ಸೂಚನಾ ಫಲಕಗಳು ಮಲಯಾಳಂ ಭಾಷೆಯಲ್ಲಿದ್ದು, ಇದು ಕನ್ನಡ ಭಾಷೆಗೆ ಅವಮಾನ ಮಾಡಿದಂತೆ, ಕನ್ನಡ ಭಾಷೆಯಲ್ಲಿ ಸೂಚನಾ ಫಲಕ ಅಳವಡಿಸಲು ಕ್ರಮ ಕೈಗೊಳ್ಳಬೇಕು ಮತ್ತು ಈ ಪ್ರದೇಶದಲ್ಲಿ ಕನ್ನಡ ಭಾಷೆಯ ಉಳಿಕೆಗೆ ಸೂಕ್ತ ಮಾರ್ಗೋಪಾಯಗಳನ್ನು ಜಿಲ್ಲಾಡಳಿತ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು. “ಈ ಪ್ರದೇಶದಲ್ಲಿ ಮಲಯಾಳಂ ಭಾಷೆಗೆ ಹೆಚ್ಚು ಒತ್ತು ನೀಡುತ್ತಿರುವುದು ಖಂಡನೀಯ” ಎಂದು ಅವರು ಹೇಳಿದರು.  ಕನ್ನಡ ರಕ್ಷಣಾ ವೇದಿಕೆಯು `ಕನ್ನಡ ನುಡಿ ಬೆಳಕು 2017′ ತಾಲೂಕು ಮಟ್ಟದ ಸಮಾವೇಶವನ್ನು ಕೂಡ ಬನ್ನಂಜೆಯಲ್ಲಿ ಹಮ್ಮಿಕೊಂಡಿತ್ತು.