ಮಂಗಳೂರು ಬಿಡಲೊಲ್ಲದ ಮಲೇರಿಯಾ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಅನಾಫಿಲೀಸ್ ಹೆಣ್ಣು ಸೊಳ್ಳೆಯಿಂದ ಹರಡುವ ಮಲೇರಿಯಾ ಎಂಬ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಮಂಗಳೂರು ಮಹಾನಗರ ಪಾಲಿಕೆ ಹರಸಾಹಸ ಪಡುತ್ತಿದ್ದರೂ ಈ ಪೀಡೆ ಇನ್ನೂ ಹಿಡಿತಕ್ಕೆ ಬಂದಿಲ್ಲ.

ಹಿಂದಿನ ವರ್ಷಕ್ಕೆ ಹೋಲಿಸಿದರೆ ನಗರದಲ್ಲಿ 2016ನೇ ಇಸವಿಯಲ್ಲಿ ಅತ್ಯಧಿಕ ಮಲೇರಿಯಾ ಪ್ರಕರಣಗಳು ದಾಖಲಾಗಿವೆ. 2015ರಲ್ಲಿ ಒಟ್ಟು 10,422 ಮಲೇರಿಯಾ ಪ್ರಕರಣಗಳು ದಾಖಲಾಗಿವೆ. ಈ ಬಾರಿ ಜನವರಿಯಿಂದ ನವೆಂಬರ್ ತಿಂಗಳವರೆಗಿನ ಅಂಕಿ ಅಂಶಗಳನ್ನು ಗಮನಿಸಿದರೆ ಅದಾಗಲೇ ಕಳೆದ ವರ್ಷದ ಅಂಕಿ ಅಂಶಗಳನ್ನು ಮೀರಿ ಬಿಟ್ಟಿದೆ. ಅಂದರೆ ಇದುವರೆಗೆ ದಾಖಲಾದ ಮಲೇರಿಯಾ ಪ್ರಕರಣಗಳ ಸಂಖ್ಯೆ 10,606.

ಮಲೇರಿಯಾ ಪ್ರಕರಣ ಹೆಚ್ಚಳಕ್ಕೆ ಮುಖ್ಯ ಕಾರಣಗಳು ಮಲೇರಿಯಾ ಸೋಂಕಿನ ಬಗ್ಗೆ ಜನರಲ್ಲಿ ಅರಿವಿನ ಕೊರತೆಯಿರುವುದು ಮತ್ತು ಹಲವಾರು ಪ್ರದೇಶಗಳಲ್ಲಿ ಡ್ರೈನೇಜ್ ವ್ಯವಸ್ಥೆಯ ಅಸಮರ್ಪಕತೆ.

ಮನಪಾದ ಆರೋಗ್ಯ ಕಾರ್ಯಕರ್ತರು ನಗರದಾದ್ಯಂತ ಹಲವಾರು ಸ್ವಚ್ಛತಾ ಅರಿವು ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದಾಗ್ಯೂ ಹೆಚ್ಚಿನ ಜನರು ಅವುಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಇದೇ ವೇಳೆ ಹಲವು ಕಟ್ಟಡ ನಿರ್ಮಾಣ ಸೈಟುಗಳು ಕೂಡ ಸಾಂಕ್ರಾಮಿಕ ರೋಗಗಳನ್ನು ತಡೆಯಲು ನೀಡಲಾಗಿರುವ ಸುರಕ್ಷತಾ ಸಲಹೆಗಳನ್ನು ಪಾಲಿಸುವಲ್ಲಿ ನಿರ್ಲಕ್ಷ್ಯ ವಹಿಸಿವೆ. ಸಾರ್ವಜನಿಕ ಸ್ಥಳಗಳಲ್ಲಿ ನಿಂತಿರುವ ನೀರು ಕೂಡ ಮಲೇರಿಯಾ ಸೊಳ್ಳೆ ಬೆಳೆಯಲು ಮತ್ತೊಂದು ಪ್ರಮುಖ ಕಾರಣ.

ಇತ್ತೀಚಿನ ವರ್ಷಗಳಲ್ಲಿ ಮಂಗಳೂರು ತಾಲೂಕಿನ ಗದ್ದೆಗಳಲ್ಲಿ ದೊಡ್ಡ ದೊಡ್ಡ ಕಟ್ಟಡಗಳು ಎದ್ದು ನಿಂತಿವೆ. ಆದರೆ ತ್ಯಾಜ್ಯ ನೀರು ನಿರ್ವಹಣೆಗೆ ಮಹತ್ವ ಕೊಟ್ಟಿಲ್ಲ. ಖಾಸಗಿ ಜಾಗಗಳಲ್ಲಿ ಕಟ್ಟಡಗಳನ್ನು ನಿರ್ಮಿಸುವವರು ಮಳೆನೀರು ಹರಿಯುವ ಚರಂಡಿಯನ್ನು ಬ್ಲಾಕ್ ಮಾಡಿಬಿಡುತ್ತಾರೆ. ಪರಿಣಾಮ ತಗ್ಗು ಪ್ರದೇಶದಲ್ಲಿ ವಾಸಿಸುವವರು ತೆರೆದ ಚರಂಡಿ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದರಿಂದ ಹಲವಾರು ಸಾಂಕ್ರಾಮಿಕ ರೋಗಗಳನ್ನು ಆಹ್ವಾನಿಸುತ್ತಿದ್ದಾರೆ.

ದೇರೆಬೈಲು ವಾರ್ಡಿನ ನೆಕ್ಕಿಲ ಎಂಬ ಪ್ರದೇಶದ ಸುಮಾರು 40 ಕುಟುಂಬಗಳು ತೆರೆದ ಚರಂಡಿ ಸಮಸ್ಯೆ ಬಗ್ಗೆ ಮನಪಾಕ್ಕೆ ದೂರಿಕೊಂಡಿದ್ದು, ಸರಿಪಡಿಸುವಂತೆ ಆಗ್ರಹಿಸಿದ್ದಾರೆ. ಆದರೆ ಅವರ ಕೂಗು ಅಧಿಕಾರಿಗಳ ಕಿವಿಗೆ ನಾಟದೇ ಇರುವುದರಿಂದ ನೆಕ್ಕಿಲದ ನಿವಾಸಿಗಳು ಹಲವು ತಿಂಗಳುಗಳಿಂದ ಸಾಂಕ್ರಾಮಿಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಆರೋಗ್ಯ ಅಧಿಕಾರಿಗಳಿಂದಲೂ ಈ ಪ್ರದೇಶ ದೂರವಿದ್ದು, ಇಲ್ಲಿ ಯಾವುದೇ ಆರೋಗ್ಯ ಅರಿವು ಕಾರ್ಯಕ್ರಮಗಳಾಗಲೀ, ಫಾಗಿಂಗ್ ಪ್ರಕ್ರಿಯೆಯಾಗಲೀ ನಡೆಯುತ್ತಿಲ್ಲ ಎಂದು ಇಲ್ಲಿನ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ. ಇಲ್ಲಿನ ನಿವಾಸಿ ದೈನಂದಿನ ಕೂಲಿ ಕಾರ್ಮಿಕ ಸುರೇಶ್ ಕಳೆದ ಮೂರು ವರ್ಷದಲ್ಲಿ 14 ಬಾರಿ ಮಲೇರಿಯಾಕ್ಕೆ ತುತ್ತಾಗಿದ್ದಾರೆ. ಅದರಲ್ಲಿಯೂ 2016ರಲ್ಲಿ ಇದುವರೆಗೆ ಮೂರು ಬಾರಿ ಮಲೇರಿಯಾ ಸೋಂಕಿಗೊಳಗಾಗಿದ್ದಾರೆ ಎಂದು ಹೇಳಿದ್ದಾರೆ.

ಮಾಲೆಮಾರ್ ನೆಕ್ಕಿಲ ಪ್ರದೇಶದ ಪ್ರತಿಯೊಂದು ಮನೆಗೂ ಮನೆ ನಂಬರ್ ನೀಡಲಾಗಿದೆ. ಇಲ್ಲಿ ಜನತೆ ಪ್ರಾಮಾಣಿಕವಾಗಿ ತೆರಿಗೆ ಪಾವತಿಸುತ್ತಿದ್ದಾರೆ. ಆದರೆ ಜನರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿಲ್ಲ. ಜನರ ಸಮಸ್ಯೆಗಳು ಪರಿಹಾರಗೊಳ್ಳದಿದ್ದರೆ ಅವರು ತೆರಿಗೆಯಾದರೂ ಯಾಕೆ ಪಾವತಿಸಬೇಕು ಎಂಬುದು ಸ್ಥಳೀಯ ಸಾಮಾಜಿಕ ಕಾರ್ಯಕರ್ತರ ಪ್ರಶ್ನೆ.

ಸುಮಾರು 406 ಮಲೇರಿಯಾ ಪ್ರಕರಣಗಳು ದೇರೆಬೈಲ್ ವಾರ್ಡೊಂದರಲ್ಲಿಯೇ ಬೆಳಕಿಗೆ ಬಂದಿದೆ. ಜೂನ್ ತಿಂಗಳಲ್ಲಿ ಸುಮಾರು 97 ಮಲೇರಿಯಾ ಪ್ರಕರಣಗಳು ಹಾಗೂ ಜುಲೈ ತಿಂಗಳಲ್ಲಿ 56 ಪ್ರಕರಣಗಳು ಮತ್ತು ಆಗಸ್ಟ್ ತಿಂಗಳಲ್ಲಿ 39 ಪ್ರಕರಣಗಳು ಬೆಳಕಿಗೆ ಬಂದಿವೆ. ಮನಪಾ ವ್ಯಾಪ್ತಿಯ ಉಳಿದ 60 ವಾರ್ಡುಗಳಿಗೆ ಹೋಲಿಸಿದರೆ ದೇರೆಬೈಲು ವಾರ್ಡು ಮಲೇರಿಯಾ ಪ್ರಕರಣಗಳಲ್ಲಿ ಅಗ್ರಸ್ಥಾನದಲ್ಲಿದೆ.

ಮಲೇರಿಯಾವನ್ನು ಯಾವುದೇ ರಾಸಾಯನಿಕಗಳಿಂದ ಅಥವಾ ಔಷಧಿಗಳಿಂದ ನಿಯಂತ್ರಿಸುವುದು ಸಾಧ್ಯವಿಲ್ಲ, ಅದನ್ನು ಸೊಳ್ಳೆ ಉತ್ಪಾದನಾ ತಾಣಗಳ ನಿರ್ಮೂಲನೆಯಿಂದ ಮತ್ತು ಸಮರ್ಥವಾದ ಜಾಗೃತಿ ಸಂದೇಶಗಳಿಂದ ಮಾತ್ರ ನಿರ್ವಹಿಸುವುದು ಸಾಧ್ಯ ಎಂದು ಬೆಂಗಳೂರು ಮಲೇರಿಯಾ ಸಂಶೋಧನಾ ರಾಷ್ಟ್ರೀಯ ಸಂಸ್ಥೆಯ ಹಿರಿಯ ವಿಜ್ಞಾನಿ ಎಸ್ ಕೆ ಘೋಷ್ ಹೇಳಿದ್ದಾರೆ.