2017 ಬೃಹತ್ ಸುಧಾರಣೆಗಳ ವರ್ಷ

ಕೇಂದ್ರ ಸಚಿವ ಅರ್ಜುನ್ ರಾಮ್ ಮೆಗ್ವಾಲ್ ಉವಾಚ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಗುರುವಾರ 2017 ವರ್ಷವನ್ನು `ಆರ್ಥಿಕ ಸುಧಾರಣೆಗಳ ವರ್ಷ’ ಎಂದು ಕರೆದಿರುವ ರಾಜ್ಯ ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಸಚಿವ ಅರ್ಜುನ್ ರಾಮ್ ಮೆಗ್ವಾಲ್, ಜನರನ್ನು ಡಿಜಿಟಲ್ ಮಾರ್ಗದಲ್ಲಿ ವ್ಯವಹರಿಸುವಂತೆ ಶಿಕ್ಷಿತರನ್ನಾಗಿಸಲು ಮತ್ತು ಪ್ರೇರೇಪಿಸಲು ಬ್ಯಾಂಕುಗಳು ಹೆಚ್ಚು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.

ಅವರು ಕೇಂದ್ರದ ಇತ್ತೀಚಿನ ಯೋಜನೆಗಳ ಕುರಿತು ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡುತ್ತಿದ್ದರು. “ರೈಲ್ವೇ ಮತ್ತು ಜನರಲ್ ಬಜೆಟ್ ವಿಲೀನ, ಮಾರ್ಚಿನಲ್ಲಿ ಮಂಡಿಸಿದ ಹಣಕಾಸು ಬಜೆಟ್ 2017, ಏಪ್ರಿಲ್ 1ರಿಂದ ಜಾರಿಯಾದ ಬಜೆಟ್ ಪ್ರಸ್ತಾವಗಳು, ಜುಲೈ ತಿಂಗಳಿಂದ ಜಾರಿಗೊಳ್ಳಲಿರುವ ಗೂಡ್ಸ್ ಮತ್ತು ಸರ್ವಿಸ್ ಟ್ಯಾಕ್ಸ್ ಪ್ರಕ್ರಿಯೆಗಳು ಎಲ್ಲವೂ ಸುಧಾರಣೆಯ ಕೇಂದ್ರಬಿಂದುಗಳು” ಎಂದು ಹೇಳಿದ್ದಾರೆ.

“ದೊಡ್ಡ ನೋಟು ಅಮಾನ್ಯದ ಬಳಿಕ ಡಿಜಿಟಲ್ ಚಲಾವಣೆ ಹೆಚ್ಚಾಗಿದೆ, ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ. ಡಿಜಿಟಲ್ ಚಲಾವಣೆ ನೆರಳು ಆರ್ಥಿಕತೆಯನ್ನು ನಿಗ್ರಹಿಸುತ್ತದೆ. ಒಂದು ವೇಳೆ ಬಳಕೆ, ಹೂಡಿಕೆ ಮತ್ತು ರಫ್ತು ಹೆಚ್ಚಾದರೂ ನಗದು ವ್ಯವಹಾರಕ್ಕೆ ಪೆಟ್ಟು ಬೀಳದು ಮತ್ತು ನಗದು ಪರಿಚಲನೆಯಲ್ಲಿ ಉಳಿಯಲಿದೆ” ಎಂದು ಹೇಳಿದ್ದಾರೆ.

ಮುದ್ರಾ ಮತ್ತು ಸ್ಟಾಂಡಪ್ ಇಂಡಿಯಾದಂತಹ ಕೇಂದ್ರ ಸರ್ಕಾರದ ಇತ್ತೀಚಿನ ಯೋಜನೆಗಳ ಫಲಾನುಭವಿಗಳಿಗೆ ಸಾಲ ಬಿಡುಗಡೆ ಪ್ರಮಾಣಪತ್ರಗಳನ್ನು ನೀಡಲಾಯಿತು.