ಯೋಜನಾ ಪ್ರಾಧಿಕಾರದಿಂದ ಗ್ರಾಮಸ್ಥರಿಗೆ ತೀವ್ರ ತೊಂದರೆ

ಸೊರಕೆ ವಿರುದ್ಧ ಮಜೂರು ಗ್ರಾ ಪಂ ಅಧ್ಯಕ್ಷ ಆಕ್ರೋಶ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಪ್ರತೀ ಸಭೆ ಸಮಾರಂಭಗಳಲ್ಲಿ ಕಾಪು ಪುರಸಭೆ ನನ್ನ ಕೊಡುಗೆ ಎಂದೆಲ್ಲಾ ಹೇಳಿಕೊಳ್ಳುತ್ತಿರುವ ಕಾಪು ಶಾಸಕರು, ಯೋಜನಾ ಪ್ರಾಧಿಕಾರದ ಅನುಷ್ಠಾನದಿಂದ ಜನರು ತತ್ತರಿಸುತ್ತಿದ್ದಾರೆ ಈ ಯೋಜನೆ ನನ್ನ ದುಡಿಮೆ ಎಂಬುದನ್ನು ಒಪ್ಪಿಕೊಳ್ಳುತ್ತಾರೆಯೇ ಎಂಬುದಾಗಿ ಮಜೂರು ಗ್ರಾ ಪಂ ಅಧ್ಯಕ್ಷ ಸಂದೀಪ್ ರಾವ್ ಪ್ರಶ್ನಿಸಿದ್ದಾರೆ.

ಕಾಪು ಪುರಸಭೆ ರಚನೆಯಾದ ಬಳಿಕ ಮಜೂರು, ಬಡಾ ಉಚ್ಚಿಲ, ಕೋಟೆ ಹಾಗೂ ಇನ್ನಂಜೆ ಗ್ರಾಮ ಪಂಚಾಯತಿಗಳನ್ನು ಯೋಜನಾ ಪ್ರಾಧಿಕಾರ ವ್ಯಾಪ್ತಿಗೆ ತಂದ ಪರಿಣಾಮ, ಜನಸಾಮಾನ್ಯಾರು 9-11 (ನೈನ್ ಲೆವೆನ್) ಭೂ ಪರಿವರ್ತನೆ, ಮನೆ ನಿರ್ಮಾಣಗಳಿಗೆ ಯೋಜನಾ ಪ್ರಾಧಿಕಾರದ ಆರಂಭಿಕ ಪ್ರಮಾಣ ಪತ್ರ ಪಡೆಯಲು ತಿಂಗಳುಗಟ್ಟಲೆ ಅಲೆದಾಡುವುದು ಮತ್ತು ಸಾವಿರಾರು ರೂಪಾಯಿ ಶುಲ್ಕ ಪಾವತಿ ಮಾಡಲು ಕೂಡಾ ಕಾಪು ಶಾಸಕ ವಿನಯಕುಮಾರ್ ಸೊರಕೆಯವರೇ ಕಾರಣ ಎಂಬುದನ್ನು ಅವರು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕಾಗಿದೆ. ಈ ಬಗ್ಗೆ ಮಜೂರು ಗ್ರಾಮ ಪಂಚಾಯಿತಿ ವತಿಯಿಂದ ಆರು ತಿಂಗಳ ಹಿಂದೆಯೇ ಶಾಸಕರಿಗೆ ಹಾಗೂ ಉಸ್ತುವಾರಿ ಸಚಿವರ ಮೂಲಕ ಮುಖ್ಯಮಂತ್ರಿಗೂ ನಮ್ಮ ಮಜೂರು ಗ್ರಾಮವನ್ನು ಯೋಜನಾ ಪ್ರಾಧಿಕಾರದಿಂದ ಸ್ವತಂತ್ರಗೊಳಿಸುವಂತೆ ಮನವಿ ಸಲ್ಲಿಸಿದ್ದರೂ ಈವರಗೆ ಯಾವುದೇ ಸ್ಪಂದನೆ ದೊರೆತ್ತಿಲ್ಲ. ಜನಸಾಮಾನ್ಯರ ನೋವು ನಮ್ಮ ಶಾಸಕರಿಗೆ ಅರ್ಥವಾದಂತೆ ಕಾಣುತ್ತಿಲ್ಲ, ಮುಂದಿನ ದಿನದಲ್ಲಾದರೂ ಶಾಸಕ ಎಚ್ಚೆತ್ತುಕೊಂಡು ನಮ್ಮ ಗ್ರಾಮಕ್ಕೆ ಯೋಜನಾ ಪ್ರಾಧಿಕಾರದಿಂದ ಮುಕ್ತಿ ನೀಡುವ ಮೂಲಕ ಜನರ ಸಮಸ್ಯೆಗೆ ಸ್ಪಂದಿಸಲಿ. ಅದಾಗದಿದ್ದರೆ ಗ್ರಾಮಸ್ಥರನ್ನು ಸೇರಿಸಿ ಹೋರಾಟ ನಡೆಸುವುದು ಅನಿರ್ವಾಯವಾದೀತು ಎಂಬುದಾಗಿ ಅವರು ಎಚ್ಚರಿಸಿದ್ದಾರೆ.