ಮುಜುಗರ ತಪ್ಪಿಸಲು `ಮೈರೆ’ ಅಂಚೆ ಕಚೇರಿ ಹೆಸರು `ಶೇಣಿ’ಗೆ ಬದಲಾವಣೆ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : `ಮೈರೆ’ ಎಂಬ ಶಬ್ದವು ಮಲಯಾಳ ಭಾಷೆಯಲ್ಲಿ ಅವಾಚ್ಯ ಶಬ್ದವಾಗಿರುವುದರಿಂದ ಕನ್ನಡದ ಅಧಿಕಾರಿಗಳಿಗೆ ಮಲಯಾಳಿಗರ ಮುಂದೆ ಮುಜುಗರ ತರುತ್ತಿದ್ದವು. ಅದ್ದರಿಂದ ಈ ಹೆಸರು ಬದಲಾವಣೆಗೆ ಹತ್ತು ವರ್ಷಗಳ ಹಿಂದಿನಿಂದಲೇ ಒತ್ತಡ ಹೇರಲಾಗಿತ್ತು. ಈ ಹಿನ್ನೆಲೆಯಲ್ಲಿ ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡಿನಲ್ಲಿ ಈ ಹಿಂದೆ ಎಣ್ಮಕಜೆ ಮತ್ತು ಪುತ್ತಿಗೆ ಗ್ರಾ ಪಂ ವ್ಯಾಪ್ತಿಯಲ್ಲಿ ಬರುವ `ಮೈರೆ’ ಗ್ರಾಮವನ್ನು ಕೇರಳ ಸರಕಾರ `ಶೇಣಿ’ಯನ್ನಾಗಿ ಬದಲಾಸಿದ್ದು, ಇದಾಗಿ ಮೂರು ವರ್ಷಗಳ ಬಳಿಕ ಮೈರೆ ಅಂಚೆ ಕಚೇರಿಯನ್ನು ಶೇಣಿ ಅಂಚೆ ಕಚೇರಿಯನ್ನಾಗಿ ಬದಲಾಯಿಸಿ ಆದೇಶ ಹೊರಡಿಸಿದೆ.

ಕಾಸರಗೋಡು ಪ್ರಧಾನ ಅಂಚೆ ಕಚೇರಿಯ ಪೆರ್ಲ ಉಪ ಅಂಚೆ ಕಚೇರಿಯ ವ್ಯಾಪ್ತಿಯ ಮೈರೆ ಬ್ರಾಂಚ್ ಅಂಚೆ ಕಚೇರಿಯ ಹೆಸರನ್ನು ಶೇಣಿ ಎಂಬುದಾಗಿ ಬದಲಾಯಿಸಿರುವ ಬಗ್ಗೆ ಅಂಚೆ ಕಚೇರಿ ಸೂಪರಿಟೆಂಡೆಂಟ್ ಮೂಲಕ ಆದೇಶ ಹೊರಡಿಸಿದ್ದಾರೆ.

ತ್ರಿ ಭಾಷಿಗ ಗ್ರಾಮದ ಹೆಸರಾದ `ಮೈರೆ’ ತುಳು ಮೂಲದ ಹೆಸರಾಗಿದೆ. ನವಿಲುಗಳು ಹೇರಳವಾಗಿ ಕಂಡು ಬರುವ ಪ್ರದೇಶವಾದ್ದರಿಂದ ಮಯೂರಪುರ ಎಂಬ ನಾಮವೂ, ಮಯೂರವನ್ನು ತುಳಿವಿನಲ್ಲಿ ಮೈರ್ ಎಂದೂ ಇದು ಬಳಿಕ ಮೈರೆ ಗ್ರಾಮವಾಗಿ ಮಾರ್ಪಟಿತ್ತು ಎಂಬುದು ಐತಿಹ್ಯ.

ಆದರೆ ಮೈರೆ ಅಂಚೆ ಕಚೇರಿ ಹೆಸರು ಬದಲಾಯಿಸಲು ಕೇಂದ್ರ ಸರಕಾರದ ಅನುಮತಿ ಬೇಕಾದ್ದರಿಂದ ಇದೀಗ ಮೂರು ವರ್ಷಗಳ ಬಳಿಕ ಅಂಚೆ ಕಚೇರಿ ಶೇಣಿಯಾಗಿ ಬದಲಾಗಿದೆ.