ಮಳೆಗೆ ಕೆಸರುಮಯವಾದ ಮೈಲೊಟ್ಟು ರಸ್ತೆ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಅತಿಕಾರಿಬೆಟ್ಟು ಗ್ರಾಮ ಪಂಚಾಯತಿಯ ಪಂಜಿನಡ್ಕ ಮೈಲೊಟ್ಟು ರಸ್ತೆ ಮಳೆಗೆ ಹೊಂಡಮಯವಾಗಿದ್ದು, ವಾಹನ ಸವಾರರು ರಸ್ತೆಯಲ್ಲಿ ಹೋಗಲು ಪರದಾಡುವ ಸನ್ನಿವೇಶ ಎದುರಾಗಿದೆ.

ಅತಿಕಾರಿಬೆಟ್ಟು ಗ್ರಾಮ ಪಂಚಾಯತಿಯ ಮೈಲೊಟ್ಟು ಜಂಕ್ಷನ್ ಬಳಿ ಕಳೆದ ಹಲವಾರು ವರ್ಷಗಳಿಂದ ಮಳೆಗೆ ಹೊಂಡ ಸೃಷ್ಠಿಯಾಗುತ್ತಿದ್ದರೂ ಪಂಚಾಯತಿ ಇದುವರೆಗೆ ಸರಿಪಡಿಸುವ ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಂಚಾಯತಿ ಕಚೇರಿ ಇರುವ ಮೈಲೊಟ್ಟಿನಿಂದ ಕಕ್ವ ರಸ್ತೆಯೂ ತೀವ್ರ ಶೋಚನೀಯ ಸ್ಥಿತಿಯಲ್ಲಿದೆ. ಅತಿಕಾರಿಬೆಟ್ಟು ಹಾಲಿನ ಸೊಸೈಟಿ ಎದುರಲ್ಲೇ ಬೃಹದಾಕಾರದ ಹೊಂಡ ಎಲ್ಲರನ್ನು ಸ್ವಾಗತಿಸುತ್ತಿದೆ. ಕಳೆದ ಹಲವಾರು ವರ್ಷಗಳಿಂದ ಪಂಜಿನಡ್ಕ-ಮೈಲೊಟ್ಟು ರಸ್ತೆಯ ಚರಂಡಿ ವ್ಯವಸ್ಥೆಯು ಅವ್ಯವಸ್ಥೆಯಿಂದ ಕೂಡಿದ್ದು, ಇತ್ತೀಚೆಗೆ ಪಂಚಾಯತಿ ಕಚೇರಿಗೆ ದೂರವಾಣಿ ಕೇಬಲ್ ಅಳವಡಿಕೆಯಿಂದ ಚರಂಡಿ ಮುಚ್ಚಿಹೋಗಿ ಅವ್ಯವಸ್ಥೆಯ ಆಗರವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಕೂಡಲೇ ಪಂಚಾಯತಿ ಎಚ್ಚೆತ್ತು ಚರಂಡಿ ದುರಸ್ಥಿಪಡಿಸುವುದರ ಜೊತೆಗೆ ರಸ್ತೆಯನ್ನು ತಾತ್ಕಾಲಿಕವಾಗಿ ಸರಿಪಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.