ರಸ್ತೆ ನಿರ್ಮಾಣದ ಬೇಡಿಕೆಯ ಹಿಂದೆ ಡೀಲಿಂಗ್ ಮಾಫಿಯಾ

ಗುರುಂಪುನಾರಲ್ಲಿ ದಲಿತ ಕಾಲೊನಿಯೇ ಇಲ್ಲ !

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ಪುತ್ತೂರು ನಗರಸಭಾ ವ್ಯಾಪ್ತಿಯ ಗುರುಂಪುನಾರ್ ಎಂಬಲ್ಲಿ ದಲಿತ ಕಾಲೊನಿ ಇದ್ದು ಅಲ್ಲಿಗೆ ತೆರಳಲು ರಸ್ತೆ ಇಲ್ಲ. ಇದರಿಂದ ದಲಿತರಿಗೆ ಅನ್ಯಾಯವಾಗಿದೆ, ಕೂಡಲೇ ಈ ಭಾಗದಲ್ಲಿ ರಸ್ತೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ಪುತ್ತೂರಿನಲ್ಲಿ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಆದರೆ ದಲಿತರು ಸೂಚಿಸಿರುವ ಸ್ಥಳದಲ್ಲಿ ಯಾವುದೇ ದಲಿತ ಕಾಲೊನಿ ಇಲ್ಲ ಎಂಬುದನ್ನು ನಗರಸಭಾ ಆಢಳಿತ ಸಾಬೀತು ಮಾಡಿದೆ.

ಗುರುವಾರದಂದು ನಗರಸಭಾ ಆಡಳಿತ ಮಾಧ್ಯಮದವರನ್ನು ಕರೆದುಕೊಂಡು ಹೋಗಿ ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿದೆ. ಸಂಘಟನೆಯ ಮುಖಂಡರು ಹೇಳಿರುವ ಸ್ಥಳದಲ್ಲಿ ಯಾವುದೇ ದಲಿತರ ಮನೆಗಳಿಲ್ಲ, ಗುರುಂಪುನಾರ್ ಪಕ್ಕದಲ್ಲೇ ದಲಿತ ಕಾಲೊನಿ ಇದ್ದು ಅಲ್ಲಿಗೆ ಸುಸಜ್ಜಿತ ದಾರಿಯ ವ್ಯವಸ್ಥೆಯೂ ಇದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಆದರೆ ಈ ವಿಚಾರ ಪ್ರತಿಭಟನೆಯಲ್ಲಿ ಭಾಗವಹಿಸಿದ ಕೆಲವು ದಲಿತ ಮುಖಂಡರಿಗೆ ಗೊತ್ತಿರಲಿಲ್ಲ ಎಂಬ ಅಂಶವೂ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬರು ದಾರಿ ಇಲ್ಲ ಎಂದು ಮಾಹಿತಿ ನೀಡಿದ್ದು, ಅದನ್ನೇ ನಂಬಿದ ಸಂಘಟನೆಯವರು ದಾರಿ ನಿರ್ಮಾಣ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು.

ಸ್ಥಳೀಯ ವ್ಯಕ್ತಿಯ ಕೃತ್ಯ

ಗುರುಂಪುನಾರನಲ್ಲಿ ಸ್ಥಳೀಯ ವ್ಯಕ್ತಿಯೊಬ್ಬರು ಜಾಗ ಖರೀದಿಸಿದ್ದು, ಈ ಜಾಗಕ್ಕೆ ತೆರಳಲು ದಾರಿ ವ್ಯವಸ್ಥೆ ಇಲ್ಲ. ಸುತ್ತಮುತ್ತಲ ಪಟ್ಟಾ ಜಾಗದಲ್ಲಿ ದಾರಿ ಮಾಡಲು ಆ ಜಾಗದ ಮಾಲಕರು ಬಿಡುತ್ತಿಲ್ಲ. ಖರೀದಿ ಮಾಡಿರುವ ಜಾಗವನ್ನು ಮಾರಾಟ ಮಾಡಬೇಕಾದರೆ ದಾರಿಯ ವ್ಯವಸ್ಥೆ ಅಗತ್ಯವಾಗಿದೆ. ದಾರಿ ನಿರ್ಮಾಣ ಮಾಡಲು ದಲಿತರನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಬೇಳೆ ಬೇಯಿಸಿಕೊಳ್ಳಲು ಜಾಗದ ಮಾಲಕ ಮಾಡಿದ ಕುತಂತ್ರವಾಗಿದೆ. ಈ ಕುತಂತ್ರಕ್ಕೆ ದಲಿತರು ಬಲಿಯಾಗಿದ್ದಾರೆ ಎನ್ನಲಾಗಿದೆ.