ಅನಧಿಕೃತ ಶರೀಯ ನ್ಯಾಯಾಲಯಗಳನ್ನು ಮುಚ್ಚುವಂತೆ ಮದ್ರಾಸ್ ಹೈಕೋರ್ಟ್ ಆದೇಶ

 ಚೆನ್ನೈ :  ತಮಿಳುನಾಡಿನಲ್ಲಿರುವ ವಿವಿಧ ಮಸೀದಿಗಳಲ್ಲಿ ಕಾರ್ಯಾಚರಿಸುತ್ತಿರುವ ಅನಧಿಕೃತ `ಶರೀಯ ನ್ಯಾಯಾಲಯ’ಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಠಿಣ ನಿಲುವು ತಾಳಿರುವ ವiದ್ರಾಸ್ ಹೈಕೋರ್ಟ್ ಈ ಶರೀಯ ನ್ಯಾಯಾಲಯಗಳ ಕಾರ್ಯಚಟುವಟಿಕೆಗಳನ್ನು ಒಂದು ತಿಂಗಳೊಳಗಾಗಿ ನಿಲ್ಲಿಸುವಂತೆ ಸಂಬಂಧಿತ ಇಲಾಖೆಗಳಿಗೆ ಆದೇಶಿಸಿದೆ.

“ಶ್ರದ್ಧಾ ಕೇಂದ್ರವೊಂದನ್ನು – ಅದು ದೇವಸ್ಥಾನ, ಮಸೀದಿ ಯಾ ಚರ್ಚ್ ಆಗಿರಬಹುದು ಅದನ್ನು ಪ್ರಾರ್ಥನೆಗಳಿಗೆ ಹೊರತಾಗಿ ಸಂವಿಧಾನಕ್ಕೆ ವಿರುದ್ಧವಾದ ವೇದಿಕೆಗಳನ್ನು ರಚಿಸಲು ಉಪಯೋಗಿಸಿದಲ್ಲಿ  ಸಂಬಂಧಿತ ಇಲಾಖೆಗಳು ಅವುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಮುಖ್ಯ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಹಾಗೂ ಜಸ್ಟಿಸ್ ಎಂ ಸುಂದರ್ ಅವರನ್ನೊಳಗೊಂಡ ಪೀಠ ಹೇಳಿದೆ.

ಈ `ಶರೀಯ ನ್ಯಾಯಾಲಯಗಳ’ ಸ್ಥಾಪನೆಯ ಹಿಂದಿನ ಜನರು ಅವುಗಳು ನ್ಯಾಯಾಲಯದ ಪರಿಧಿಯ ಹೊರಗಿದ್ದರೂ ಅವುಗಳಿಗೆ ನ್ಯಾಯಾಂಗ ವೇದಿಕೆಯ ಬಣ್ಣ ನೀಡಲು ಶ್ರಮಿಸಿರುವುದಕ್ಕೆ ನ್ಯಾಯಾಲಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಚೆನ್ನೈನ ಅನ್ನಾ ಸಲೈನಲ್ಲಿರುವ ಮಕ್ಕಾ ಮಸ್ಜಿದ್ ಶರೀಯತ್ ಕೌನ್ಸಿಲ್ ಮುಖ್ಯವಾಗಿ ವೈವಾಹಿಕ ವಿವಾದಗಳ ಸಂಬಂಧ ನ್ಯಾಯ ನೀಡುವ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಅದರ ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ಸಂಬಂಧಿತರಿಗೆ ಆದೇಶ ನೀಡಬೇಕೆಂದು ಕೋರಿ ಎನ್ನಾರೈ ಒಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯ ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಾಲಯ ಮೇಲಿನಂತೆ ಆದೇಶ ನೀಡಿದೆ.

ಇಂಗ್ಲೆಂಡಿನಿಂದ ಎಂಬಿಎ ಪದವಿ ಪಡೆದಿರುವ ಅಬ್ದುಲ್ ರಹಮಾನ್ ಅವರು ದೂರುದಾರರಾಗಿದ್ದು  ಆರಂಭದಲ್ಲಿ ಅವರು ಈ ಶರೀಯತ್ ಕೌನ್ಸಿಲನ್ನು ನಂಬಿ ತನ್ನ ಪತ್ನಿಯ ಜತೆ  ಮತ್ತೆ ತನಗೆ ಬಾಳುವ ಅವಕಾಶ ನೀಡಲು ಸಹಾಯ ಮಾಡಲು ಅದನ್ನು ಸಂಪರ್ಕಿಸಿದ್ದರೂ ಅದು  ಅವರಿಂದ ತಲಾಖ್ ನಾಮೆಗೆ ಸಹಿ ಹಾಕಿಸಿ ಅವರನ್ನು ಅವರ ಪತ್ನಿಯಿಂದ ಬೇರ್ಪಡಿಸಿದ ನಂತರ ಅವರು ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ದಾಖಲಿಸಿದ್ದರು.

ಮಸೀದಿಯಿಂದ ಅನಧಿಕೃತ ನ್ಯಾಯಾಲಯವೊಂದು ಕಾರ್ಯಾಚರಿಸುತ್ತಿದೆ ಹಾಗೂ ನೂರಾರು ಕಾನೂನುಬದ್ಧ ವಿವಾಹಗಳನ್ನು ಯಾವುದೇ ಧಾರ್ಮಿಕ ಯಾ ಕಾನೂನಾತ್ಮಕ ಒಪ್ಪಿಗೆಯಿಲ್ಲದೆ ರದ್ದುಗೊಳಿಸಲಾಗುತ್ತಿದೆ ಎಂದು ಅರ್ಜಿದಾರರ ವಕೀಲರಾದ ಎ ಸಿರಾಜುದ್ದೀನ್ ನ್ಯಾಯಾಲಯದ ಮುಂದೆ ಹೇಳಿದ್ದರು. ಮುಸ್ಲಿಮರ ಮನಸ್ಸಿನಲ್ಲಿ ಧಾರ್ಮಿಕ ಭಯ ಮೂಡಿಸಿ ಮದುವೆಗಳನ್ನು ರದ್ದುಗೊಳಿಸಿ ಆಸ್ತಿ ವಿವಾದಗಳಲ್ಲೂ ಅದು ತೀರ್ಪ ನೀಡುತ್ತಿತ್ತೆಂದು ಅವರು ಹೇಳಿದ್ದರು.

ಈ ಸಂಬಂಧ ತನಿಖೆ ನಡೆಸಿ ವರದಿ ನೀಡುವಂತೆ ನ್ಯಾಯಾಲಯ ಈ ಹಿಂದಿನ ಆದೇಶದಲ್ಲಿ ಹೇಳಿದ್ದ ಹಿನ್ನೆಲೆಯಲ್ಲಿ ಈ ವರದಿಯನ್ನು ಇತ್ತೀಚೆಗೆ ನ್ಯಾಯಾಲಯದ ಮುಂದೆ ಪ್ರಸುತಪಡಿಸಲಾಗಿತ್ತು. ಆದರೆ  ಆ ವರದಿಯನ್ನು  ನೋಡಿದ ನ್ಯಾಯಾಲಯ ಈ ಶರೀಯತ್ ಕೌನ್ಸಿಲುಗಳು ಮಸೀದಿಯೊಳಗೆ ಕಾರ್ಯನಿರ್ವಹಿಸುತ್ತಿರುವುದರಿಂದ ಅವುಗಳ ವಿರುದ್ಧ ತಮಗೆ ಕ್ರಮ ಕೈಗೊಳ್ಳಲು ಆಗಿಲ್ಲ ಎಂಬ ಅಧಿಕಾರಿಗಳ ವಾದವನ್ನು ಒಪ್ಪಿಲ್ಲ.

ಈ ಶರೀಯತ್ ಕೌನ್ಸಿಲುಗಳ ಕಾರ್ಯನಿರ್ವಹಣೆ ಬಗ್ಗೆ ನ್ಯಾಯಾಲಯ ಹೀಗೆಂದು ಹೇಳಿತು – “ದಾಖಲೆಗಳನ್ನು ಪರಿಶೀಲಿಸಲಾಗಿ ಇಲ್ಲಿನ  ಕಲಾಪಗಳು ಮಕ್ಕಾ ಕೌನ್ಸಿಲ್ ನೀಡುವ  `ಶರೀಂiÀiತ್ ನಿರ್ಧಾರ’ಗಳಂತಿವೆ. ಅದು ವಕೀಲರು ಸೇರಿದಂತೆ ಪದಾಧಿಕಾರಿಗಳನ್ನು ಹೊಂದಿದೆ, ಪ್ರಕರಣ ಸಂಖ್ಯೆಗಳು, ಕಡತ ಸಂಖ್ಯೆಗಳನ್ನು ಉಲ್ಲೇಖಿಸುತ್ತದೆ ಹಾಗೂ ಅರ್ಜಿದಾರರು ಮತ್ತು ಪ್ರತಿವಾದಿಗಳು ಎಂದು ಇತ್ತಂಡಗಳನ್ನು ವಿವರಿಸುತ್ತದೆ ಮತ್ತು ತೀರ್ಪಿನ ದಿನಾಂಕವನ್ನೂ ತಿಳಿಸುತ್ತದೆ. ಇದರ ನಂತರ ಕೌಟುಂಬಿಕ ವಿವಾದಗಳ ವಿಚಾರದಲ್ಲಿ ಸಮನ್ಸ್ ಕೂಡ ನೀಡಲಾಗುತ್ತದೆ.”

ಈ ಶರೀಯತ್ ನ್ಯಾಯಾಲಯಕ್ಕೆ ನ್ಯಾಯಾಂಗ ವೇದಿಕೆಯ ಬಣ್ಣ ನೀಡುವ ಪ್ರಯತ್ನ ಮಾಡಲಾಗಿದೆ ಎಂದ ನ್ಯಾಯಾಲಯ ಈ ಶರೀಂiÀiತ್ ನ್ಯಾಯಾಲಯಗಳನ್ನು ನಾಲ್ಕು ವಾರಗಳೊಳಗಾಗಿ ಮುಚ್ಚಿ ವರದಿ ನೀಡಬೇಕೆಂದು ತಮಿಳ್ನಾಡು ಸರಕಾರಕ್ಕೆ ಆದೇಶಿಸಿದೆ.