ಎಸ್ಸೆಸ್ಸೆಲ್ಸಿ ಪರೀಕ್ಷೆ ಕೇಂದ್ರೀಕರಣದ ಜವಾಬ್ದಾರಿಯಲ್ಲಿ ಮದ್ರಸಕ್ಕೂ ಪಾಲು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಎಸ್ಸೆಸ್ಸೆಲ್ಸಿ ಪರೀಕ್ಷೆ ಸಂದರ್ಭ ವಿದ್ಯಾರ್ಥಿಗಳ ಮೇಲೆ ಗಮನ ಕೇಂದ್ರೀಕರಣಕ್ಕೆ  ಮದ್ರಸಗಳ ಯೋಜನೆಗಳನ್ನು ವಿಸ್ತರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಇದಕ್ಕೆ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಹೆತ್ತವರು, ಧಾರ್ಮಿಕ ಮುಖಂಡರು ಮತ್ತು ವಿದ್ಯಾರ್ಥಿಗಳಿಂದ ಸಕಾರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಇಲಾಖೆಯು ಕಳೆದ ಬಾರಿ ಕೆಲವು ಕಾರ್ಯಕ್ರಮಗಳನ್ನು ಮದ್ರಸಗಳಿಗೆ ನಿಯೋಜಿಸಿತ್ತು. ಇದರಿಂದ ಉತ್ತಮ ಫಲಿತಾಂಶ ಕಂಡುಬಂದ ಹಿನ್ನೆಲೆಯಲ್ಲಿ ಈ ಬಾರಿ ಈ ಯೋಜನೆಗಳನ್ನು ಜಿಲ್ಲೆಯಾದ್ಯಂತ ವಿಸ್ತರಿಸಲು ನಿರ್ಧರಿಸಿದೆ.

“ಕಳೆದ ವರ್ಷ ಇಲಾಖೆಯ ಈ ಸಂವೇದನಾಶೀಲ ಕಾರ್ಯಕ್ರಮ ಸಕಾರಾತ್ಮಕ ಫಲಿತಾಂಶ ನೀಡಿದ್ದು, ಎಸ್ಸೆಸ್ಸೆಲ್ಸಿ ಫಲಿತಾಂಶದ ಶ್ರೇಣಿ 8ರಿಂದ ಮೂರಕ್ಕೆ ಏರಿತ್ತು. ಇನ್ನೊಂದು ಮಟ್ಟದಲ್ಲಿ ಯತ್ನವನ್ನು ಕೈಗೊಳ್ಳುವ ನಿಟ್ಟಿನಲ್ಲಿ ಇಲಾಖೆಯು ಯೋಜನೆಯನ್ನು ಜಿಲ್ಲೆಯಾದ್ಯಂತ ವಿಸ್ತರಿಸಿದೆ. ಈ ಯೋಜನೆಗಳನ್ನು ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಇರುವ ಹೆಚ್ಚಿನ ಎಲ್ಲಾ ಪ್ರದೇಶಗಳಿಗೆ ವಿಸ್ತರಿಸಿದ್ದು, ವಿದ್ಯಾರ್ಥಿಗಳ ಹೆತ್ತವರು, ಧಾರ್ಮಿಕ ಮುಖಂಡರು ಮತ್ತು ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆದಿದ್ದೇವೆ” ಎಂದು ಸಾರ್ವಜನಿಕ ಶಿಕ್ಷಣ ಉಪ ನಿರ್ದೇಶಕ ವಾಲ್ಟರ್ ಎಚ್ ಡಿಮೆಲ್ಲೋ ಹೇಳಿದ್ದಾರೆ.

“2016 ಎಸ್ಸೆÉಸ್ಸೆಲ್ಸಿ ಪರೀಕ್ಷೆಯಲ್ಲಿ 8,943 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇವರಲ್ಲಿ 2ಬಿ ವಿಭಾಗದಲ್ಲಿ 82.94 ಪರ್ಸೆಂಟ್ ಫಲಿತಾಂಶದೊಂದಿಗೆ 7,417 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಉತ್ತೀರ್ಣದ ಶೇಖಡಾವಾರು ಫಲಿತಾಂಶ 70ರಿಂದ 75ರ ಒಳಗೆ ಇದ್ದು, ಇದನ್ನು ಇನ್ನೂ ಹೆಚ್ಚಿಸಲು ಬಯಸಿದ್ದೇವೆ” ಎಂದು ವಾಲ್ಟರ್ ವಿವರಿಸಿದ್ದಾರೆ.

ಈ ಸಂವೇದನಾ ಕಾರ್ಯಕ್ರಮವನ್ನು ಬಂಟ್ವಾಳ, ಬೆಳ್ತಂಗಡಿ, ಮಂಗಳೂರು ಉತ್ತರ, ಮೂಡುಬಿದಿರೆ, ಪುತ್ತೂರು, ಸುಳ್ಯ ಮತ್ತು ಮಂಗಳೂರು ದಕ್ಷಿಣದ ಪ್ರತಿ ಬ್ಲಾಕ್ ಶಿಕ್ಷಣ ಅಧಿಕಾರಿಗಳಿಗಳ ಮುಂದಾಳತ್ವದಲ್ಲಿ ಕೈಗೊಳ್ಳಲಾಗಿತ್ತು.

“ಈ ಕುರಿತಾಗಿ ಹೆತ್ತವರು, ಧಾರ್ಮಿಕ ಮುಖಂಡರು ಮತ್ತು ವಿದ್ಯಾರ್ಥಿಗಳ ಮೂರು ಪ್ರತ್ಯೇಕ ಸಭೆಗಳನ್ನು ಕರೆದು ಎಸ್ಸೆÉಸ್ಸೆಲ್ಸಿ ಪರೀಕ್ಷಾ ಸಂದರ್ಭ ಮದ್ರಸಗಳಲ್ಲಿ ಸಂಜೆ ತರಗತಿಗಳನ್ನು ಕೈಗೊಂಡು ಎಸ್ಸೆಸ್ಸೆಲ್ಸಿ ಪರೀಕ್ಷೆಗಳ ಬಗ್ಗೆ ಗಮನ ಕೇಂದ್ರೀಕರಿಸುವಂತೆ ತಿಳಿಸಿದ್ದೇವೆ” ಎಂದು ಬೆಳ್ತಂಗಡಿ ಉಸ್ತುವಾರಿ ಬಿಇಒ ಹೇಳಿದ್ದಾರೆ.