1100 ವಿದೇಶಿ ಪ್ರವಾಸಿಗರನ್ನು ಹೊತ್ತು ಪಣಂಬೂರಿಗೆ ಬಂದ ಐಷಾರಾಮಿ ಹಡಗು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಪ್ರವಾಸೋದ್ಯಮ ತಾಣವಾಗಿರುವ ಮಂಗಳೂರು ದೈವದೇವಸ್ಥಾನಗಳ ನೆಲೆವೀಡು. ಇತ್ತೀಚಿನ ದಿನಗಳಲ್ಲಿ ಮಂಗಳೂರಿಗೆ ಬರುತ್ತಿರುವ ಪ್ರವಾಸಿಗರ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ. ಇದೀಗ ಮೊದಲ ಬಾರಿಗೆ ನವಮಂಗಳೂರು ಬಂದರಿಗೆ ಐಡಾಬೆಲ್ಲಾ ಐಷಾರಾಮಿ ಪ್ರವಾಸಿ ಹಡಗು 1100 ಮಂದಿ ಪ್ರವಾಸಿಗರನ್ನು ಕರೆತಂದಿದ್ದು, ಅವರು ಇಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿದರು.

ಐಡಾಬೆಲ್ಲಾ ಐಷಾರಾಮಿ ಹಡಗನ್ನು 2008ರಲ್ಲಿ ಜರ್ಮನಿಯಲ್ಲಿ ನಿರ್ಮಿಸಲಾಗಿದ್ದು, 230 ಮೀ ಉದ್ದ, 32 ಮೀ ಅಗಲವಿದೆ. 69,203 ಟನ್ ಭಾರವಿದ್ದು, 2500 ಮಂದಿ ಪ್ರವಾಸಿಗರು, 646 ಸಿಬ್ಬಂದಿಯನ್ನು ಒಯ್ಯುವ ಸಾಮಥ್ರ್ಯವನ್ನು ಇದು ಹೊಂದಿದೆ.

ಜರ್ಮನಿ, ಸ್ವಿಝರಲ್ಯಾಂಡ್, ಆಸ್ಟ್ರೇಲಿಯಾ ಇತ್ಯಾದಿ ಕಡೆಗಳಿಂದ ಬಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ನಗರ ಪ್ರದಕ್ಷಿಣೆ ಹಾಕಿದ್ದಾರೆ. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ, ಸೈಂಟ್ ಅಲೋಶಿಯಸ್ ಚಾಪೆಲ್, ಮೂಡುಬಿದಿರೆ ಜೈನ ಬಸದಿಗಳಿಗೆ ತೆರಳಿ ಸೌಂದರ್ಯ ವೀಕ್ಷಣೆ ಮಾಡಿದರು.ಅಲ್ಲದೆ ಮಾರುಕಟ್ಟೆಗೆ ತೆರಳಿ ತಮ್ಮೂರಿಗೆ ಕೊಂಡುಹೋಗಬೇಕಾದ ಸೊತ್ತುಗಳನ್ನು ಖರೀದಿಸಿದರು.

ಕೆಲವು ಪ್ರವಾಸಿಗರು ಗೂಗಲ್ ಮ್ಯಾಪ್ ನೋಡುತ್ತಾ ಸೈಕಲಿನಲ್ಲಿ ಸುತ್ತಾಡಿದ್ದು ವಿಶೇಷವಾಗಿತ್ತು. ಇನ್ನು ಕೆಲವರು ಉಡುಪಿ ಶ್ರೀಕೃಷ್ಣಮಠ, ಕಾರ್ಕಳದ ಗೊಮ್ಮಟೇಶ್ವರ ಕಂಡು ಕೈಮುಗಿದರು.

ಪ್ರವಾಸಿಗರಿಗೆ ಇಲ್ಲಿನ ಆಟೋಗಳೆಂದರೆ ಅಚ್ಚುಮೆಚ್ಚು. ಬಹಳಷ್ಟು ಮಂದಿ ರಿಕ್ಷಾಗಳನ್ನೇರಿ ಸಿಟಿ ಸೆಂಟರ್ ಮಾಲ್, ಬಿಗ್ ಬಜಾರ್ ಹಾಗೂ ಫೋರಂ ಮಾಲುಗಳಿಗೆ ತೆರಳಿ ಎಂಜಾಯ್ ಮಾಡಿದರು.